ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ (ಅಕ್ಟೋಬರ್ 3) 'ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್' ಅನ್ನು ಸ್ವೀಕರಿಸಿದರು. ವಿಶ್ವಸಂಸ್ಥೆಯ ಅತ್ಯುನ್ನತ ಗೌರವ ಪುರಸ್ಕಾರ 'ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್' ಅನ್ನು ವಿಶ್ವಸಂಸ್ಥೆಯ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಪ್ರಧಾನಿ ಮೋದಿ ಅವರಿಗೆ ನೀಡಿ ಗೌರವಿಸಿದರು.


COMMERCIAL BREAK
SCROLL TO CONTINUE READING

ಪ್ರಶಸ್ತಿ ಸ್ವೀಕರಿಸಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಶಸ್ತಿಯನ್ನು ರಾಷ್ಟ್ರದ ಜನತೆಗೆ ಅರ್ಪಿಸಿದರು. ಹವಾಮಾನ ಮತ್ತು ವಿಪತ್ತುಗಳು ನೇರವಾಗಿ ಸಂಸ್ಕೃತಿಗೆ ಸಂಬಂಧಿಸಿವೆ; ವಾತಾವರಣವು ಸಂಸ್ಕೃತಿಯ ಕೇಂದ್ರವಾಗಿದ್ದರೆ, ವಿಪತ್ತನ್ನು ತಡೆಗಟ್ಟಲು ಸಾಧ್ಯವಿಲ್ಲ. ನಾನು 'ಸಬ್ಕಾ ಸಾಥ್' ಎಂದು ಹೇಳಿದಾಗ, ನಾನು ಅದರಲ್ಲಿ ಸಂಸ್ಕೃತಿಯನ್ನು ಕೂಡಾ ಸೇರಿಸಿದ್ದೇನೆ ಎಂದರು.



ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಗೌರವ ಪುರಸ್ಕಾರ 'ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್' ಅನ್ನು ಪ್ರಧಾನಿ ಮೋದಿ ಅವರಿಗೆ ನೀಡಿದೆ. ಭಾರತದಲ್ಲಿ 2022ರ ವೇಳೆಗೆ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗಾಗಿ ಕೈಗೊಂಡಿರುವ ಕ್ರಮಗಳು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸೌರಶಕ್ತಿ ರಾಷ್ಟ್ರಗಳ ಮೈತ್ರಿಯಲ್ಲಿನ ನಾಯಕತ್ವವನ್ನು ಪರಿಗಣಿಸಿ ಪ್ರಧಾನಿ ಮೋದಿ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ.


ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕೊಡುಗೆ ನೀಡಿರುವ ಮತ್ತು ಪರಿಸರಕ್ಕೆ ಸಂಬಂಧಿತ ತುರ್ತು ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳುವ ವಿನೂತನ ಕ್ರಮ ಮತ್ತು ಪ್ರಯತ್ನವನ್ನು ಗಮನಿಸಿ ಜಗತ್ತಿನ ಆರು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ 'ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್' ನೀಡಲಾಗಿದೆ.