ಲಕ್ನೋ: ಹಣ ಕಂಡರೆ ಹೆಣನೂ ಬಾಯಿ ಬಿಡುತ್ತೆ ಅಂತ ಹೇಳ್ತಾರೆ. ಇದು ಜೈಲಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರುವವರಿಗೂ ಅನ್ವಯಿಸುತ್ತದೆ. ಫೈಜಾಬಾದ್ ಜೈಲಿನಲ್ಲಿ ಖೈದಿಯೊಬ್ಬ ತನ್ನ ಜನ್ಮದಿನವನ್ನು ಆಚರಿಸಿಕೊಂಡಿದ್ದಾನೆ. ಖೈದಿಯು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರೆ, ಪೊಲೀಸರು ಚಪ್ಪಾಳೆ ತಟ್ಟಿ ಕೇಕ್ ತಿಂದು ಸಂಭ್ರಮಿಸಿದ್ದಾರೆ. ಆದರೆ ಖೈದಿ ತನ್ನ ಹುಟ್ಟು ಹಬ್ಬದ ಆಚರಣೆಗಾಗಿ ಜೈಲರ್ ಗೆ ಅತಿ ಹೆಚ್ಚು ಶುಲ್ಕವನ್ನು ಪಾವತಿಸಬೇಕಾಯಿತು. ಜನ್ಮದಿನದ ಆಚರಣೆ ಸಿದ್ಧತೆಗಾಗಿ ಜೈಲರ್ ಗೆ ಖೈದಿಯು ಬರೋಬ್ಬರಿ ಒಂದು ಲಕ್ಷ ರೂ. ನೀಡಿದ್ದಾನೆ. ಜೈಲಿನಲ್ಲಿ ಖೈದಿಯ ಜನ್ಮದಿನ ಆಚರಣೆ ವಿಡಿಯೋ ಈಗ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ, ಬಾಗ್ಪಾತ್ ಜೈಲಿನಲ್ಲಿ ಕುಖ್ಯಾತ ಖೈದಿಗಳಾದ ಮುನ್ನಾ ಬಜರಂಗಿಯನ್ನು ಕೊಂದ ಘಟನೆಯ ನಂತರ, ಜೈಲು ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡವು. ಉತ್ತರ ಪ್ರದೇಶದ ಜೈಲುಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಉನ್ನತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಈ ಎಲ್ಲವನ್ನೂ ನಿರಾಕರಿಸುವ ಮೂಲಕ, ಯುಪಿ ಜೈಲಿನಲ್ಲಿನ ಭದ್ರತಾ ವ್ಯವಸ್ಥೆಗಳನ್ನು ತೆರೆದಿಡುವ ವೀಡಿಯೊ ವೈರಲ್ ಆಗುತ್ತಿದೆ.


ಯಾವುದೇ ರೀತಿಯ ಚೂಪಾದ ವಸ್ತುವನ್ನು ಹಾಗೂ ಸುಡುವಂತಹ ವಸ್ತುವನ್ನು ಜೈಲಿನೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಈ ವೀಡಿಯೋದಲ್ಲಿ ದರೋಡೆಕೋರ ಶಿವೇಂದ್ರ ಸಿಂಗ್ ಜೈಲಿನ ಒಳಗೆ ತನ್ನ ಛಾಯಾಚಿತ್ರ ಒಳಗೊಂಡಿರುವ ಕೇಕ್ ಕತ್ತರಿಸುತ್ತಿದ್ದಾನೆ. ಮೊದಲು ಮೇಣದ ಬತ್ತಿ ಹಚ್ಚಿ, ಕೇಕ್ ಕತ್ತರಿಸಿ ತನ್ನ ಹುಟ್ಟು ಹಬ್ಬ ಆಚರಿಸಿದ್ದಾನೆ. ಈ ಜನ್ಮದಿನ ಆಚರಣೆಯ ಸಂಭ್ರಮವನ್ನು ವಿಡಿಯೋ ಕೂಡ ಮಾಡಲಾಗಿದೆ. 



ಈ ಘಟನೆ ಜುಲೈ 23 ರಂದು ನಡೆದಿದೆ ಎನ್ನಲಾಗಿದೆ. ಶನಿವಾರ ಈ ವಿಚಾರಣೆಗಾಗಿ ನ್ಯಾಯಾಲಯ ತಲುಪಿದ್ದ ಖೈದಿ ಶಿವೇಂದ್ರ ಬಳಿ ವರದಿಗಾರರು ಹುಟ್ಟು ಹಬ್ಬ ಆಚರಣೆ ಬಗ್ಗೆ ಪ್ರಶ್ನಿಸಿದಾಗ, ಜೈಲರ್ ವಿನಯ್ ಸಿಂಗ್ ತನ್ನ ಹುಟ್ಟುಹಬ್ಬದ ಪೂರ್ಣ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಅವರಿಗೆ ಒಂದು ಲಕ್ಷ ರೂ. ನೀಡಲಾಗಿದೆ ಎಂದು ಶಿವೇಂದ್ರ ಹೇಳಿದ್ದಾರೆ. ಕೇಕ್, ಮೇಣದಬತ್ತಿ, ಚಾಕು, ಲೈಟರ್ ಮತ್ತು ಮೊಬೈಲ್ ಫೋನ್ ವ್ಯವಸ್ಥೆಗಾಗಿ ಜೈಲರ್ ಗೆ ಒಂದು ಲಕ್ಷ ರೂ. ನೀಡಲಾಗಿದೆ. ಪ್ರತಿ ಸೌಲಭ್ಯವನ್ನು ಜೈಲಿನಲ್ಲಿ ಒದಗಿಸಲಾಗುತ್ತದೆ. ಆದರೆ ಅದಕ್ಕಾಗಿ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಶಿವೇಂದ್ರ ತಿಳಿಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಶಿವೇಂದ್ರ ಜೈಲಿನಲ್ಲಿದ್ದಾರೆ. ದರೋಡೆಕೋರ ಎಂಬ ಆರೋಪ ಸಹ ಇವನ ಮೇಲಿದೆ.


ವೀಡಿಯೊ ವೈರಲ್ ನಂತರ, ಎಡಿಜಿ ಚಂದ್ರ ಪ್ರಕಾಶ್ ಈ ವಿಷಯವನ್ನು ತನಿಖೆ ಮಾಡಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಆದೇಶ ನೀಡಿ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.