ನಾನು ಮತ್ತು ಪ್ರಿಯಾಂಕಾ ನಮ್ಮ ತಂದೆ ಹತ್ಯೆಗೈದವರನ್ನು ಕ್ಷಮಿಸಿದ್ದೇವೆ-ರಾಹುಲ್ ಗಾಂಧಿ
ನವದೆಹಲಿ: ಕೌಲಾಲಂಪುರದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ತಮ್ಮ ತಂದೆ ರಾಜೀವ್ ಗಾಂಧಿಯವರ ಹತ್ಯೆ ಬಗ್ಗೆ ಮಾತನಾಡುತ್ತಾ, ಅವರನ್ನು ಹತ್ಯೆ ಗೈದವರನ್ನು ಸಂಪೂರ್ಣವಾಗಿ ಕ್ಷಮಿಸಿದ್ದೇವೆ ಎಂದು ತಿಳಿಸಿದರು.
ಇಲ್ಲಿನ ಸಂವಾದದ ಸಂದರ್ಭದಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ "ನಮಗೆ ನಮ್ಮ ತಂದೆ ಸಾವನ್ನಪ್ಪುತ್ತಾರೆ ಎಂದು ತಿಳಿದಿತ್ತು, ಅದೇ ರೀತಿಯಾಗಿ ನಮ್ಮ ಅಜ್ಜಿ ಇಂದಿರಾ ಗಾಂಧಿಯೂ ಸಾವನ್ನಪ್ಪುತ್ತಾರೆ ಎನ್ನುವುದು ತಿಳಿದಿತ್ತು, ನಾವು ರಾಜಕಾರಣದಲ್ಲಿ ಯಾವಾಗ ದುಷ್ಟ ಶಕ್ತಿಗಳನ್ನು ಎದುರಿಸುತ್ತೆವೋ ಆ ಹಂತದಲ್ಲಿ ನಾವು ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆಗ ಅದು ನಮ್ಮನ್ನು ಸಾವಿನ ಹಂತಕ್ಕೂ ಕೂಡ ಕರೆದೊಯ್ಯಬಹುದು" ಎಂದರು
ಇನ್ನು ಮುಂದುವರೆದು ಮಾತನಾಡಿದ ಅವರು "ರಾಜಕಾರಣದಲ್ಲಿ ನಾವು ದೊಡ್ಡ ಶಕ್ತಿಗಳ ಜೊತೆ ಹೋರಾಡಬೇಕಾಗಿರುತ್ತದೆ, ನಮಗೆ ಅವು ಕಣ್ಣಿಗೆ ಕಾಣದೆ ಇರಬಹುದು ಆದರೆ ಅವುಗಳು ಬಹಳ ಶಕ್ತಿಯುತವಾದವುಗಳು, ಅವು ಖಂಡಿತಾ ನಮಗೆ ಧಕ್ಕೆಯನ್ನುಂಟುಮಾಡಬಲ್ಲವು"ಎಂದರು,
"ನಾನು ಎಲ್ ಟಿ ಟಿ ಇ ಪ್ರಭಾಕರನ್ ರವರ ಮೃತ ದೇಹವನ್ನು ಟಿವಿಯಲ್ಲಿ ನೋಡಿದಾಗ,ನನಗೆ ಎರಡು ರೀತಿಯ ಭಾವನೆಗಳು ವ್ಯಕ್ತವಾದವು, ಮೊದಲನೆಯದಾಗಿ ಯಾಕೆ ಈ ಮನುಷ್ಯನನ್ನು ಇಷ್ಟು ಹೀನಾಯವಾಗಿಸಿದ್ದಾರೆ, ಎರಡನೇದಾಗಿ ಅವನು ಮತ್ತು ಅವನ ಮಕ್ಕಳನ್ನು ನೋಡಿದಾಗ ನಿಜಕ್ಕೂ ಕೆಟ್ಟದ್ದೆನಿಸಿತು.ನಾವು ನಿಜಕ್ಕೂ ಹಲವು ವರ್ಷಗಳ ಕಾಲ ದುಃಖಿತರಾಗಿದ್ದೆವು,ಆಕ್ರೋಶಗೊಂಡಿದ್ದೆವು,ಆದರೆ ಈಗ ನಾವು ಅದನ್ನು ಸಂಪೂರ್ಣವಾಗಿ ಮನ್ನಿಸಿದ್ದೇವೆ."
ರಾಜೀವ್ ಗಾಂಧಿ 1991 ರಲ್ಲಿ ಎಲ್ ಟಿ ಟಿ ಇ ಮಹಿಳೆಯ ಆತ್ಮಹತ್ಯಾ ದಾಳಿಗೆ ಬಲಿಯಾಗಿದ್ದರು. ಅದೇ ರೀತಿಯಾಗಿ ಇಂದಿರಾ ಗಾಂಧಿ ಸೆಕ್ಯೂರಿಟಿ ಗಾರ್ಡ್ ಗಳ ಮೂಲಕ 1984 ರಲ್ಲಿ ಹತ್ಯೆಯಾಗಿದ್ದರು.