ಬ್ಯಾಂಕುಗಳ ವಿಲೀನ ವಿರೋಧಿಸಿ ಇಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ಬ್ಯಾಂಕ್ ಸಂಘಟನೆಗಳ ಒಕ್ಕೂಟವಾದ ಯುಎಫ್‌ಬಿಯು ಮುಷ್ಕರಕ್ಕೆ ಕರೆ ನೀಡಿವೆ.
ನವದೆಹಲಿ: ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕುಗಳನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಇಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಹಲವು ಬ್ಯಾಂಕುಗಳು ಬಂದ್ ಆಗಲಿದ್ದು, ಇದರಿಂದ ಬ್ಯಾಂಕಿಂಗ್ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಖಾಸಗಿ ಬ್ಯಾಂಕ್‌ಗಳ ಸೇವೆ ಎಂದಿನಂತೆಯೇ ನಡೆಯಲಿದೆ. 10 ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಂದಿರುವ ಬ್ಯಾಂಕ್ ಸಂಘಟನೆಗಳ ಒಕ್ಕೂಟವಾದ ಯುಎಫ್‌ಬಿಯು, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್‌ಗಳ ಒಕ್ಕೂಟ(ಎಐಬಿಒಸಿ), ಅಖಿಲ ಭಾರತ ಉದ್ಯೋಗಿಗಳ ಸಂಘಟನೆ(ಎಐಬಿಇಎ), ಎನ್‌ಸಿಬಿಇ, ಎನ್‌ಒಬಿಡಬ್ಲ್ಯುಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ.
ಒಂದೇ ವಾರದೊಳಗೆ ಎರಡನೇ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ:
ಒಂದು ವಾರದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಬ್ಯಾಂಕ್ ಮುಷ್ಕರ ಇದಾಗಿದ್ದು, ಕಳೆದ ಶುಕ್ರವಾರ (ಡಿ 21), ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಅಧಿಕಾರಿಗಳ ಒಕ್ಕೂಟ ವಿಲೀನದ ವಿರುದ್ಧ ಪ್ರತಿಭಟಿಸಲು ಮತ್ತು ವೇತನ ಸಮಾಲೋಚಗಾಗಿ ಮುಷ್ಕರ ಕೈಗೊಂಡಿತ್ತು. ಇದೀಗ ಸಾರ್ವಜನಿಕ ವಲಯ ಬ್ಯಾಂಕುಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದ್ದು, ಬುಧವಾರವೂ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವ್ಯವಹಾರಗಳು ಸ್ಥಗಿತಗೊಂಡು ಗ್ರಾಹಕ ಸೇವೆಗೆ ತೊಡಕಾಗುವ ಸಾಧ್ಯತೆಗಳಿವೆ.