ನವದೆಹಲಿ:  ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿರುವ ಭೀಕರ ದಾಳಿಗೆ ಬಲವಾದ ಖಂಡನೆ ವ್ಯಕ್ತವಾಗುತ್ತಿದೆ. ಈ ಆತ್ಮಹತ್ಯಾ ದಾಳಿಯಲ್ಲಿ 40 ಜವಾನರು ಹುತಾತ್ಮರಾಗಿದ್ದಾರೆ. ದೇಶ ಹಾಗೂ ವಿಶ್ವದ ಹಲವು ರಾಷ್ಟ್ರಗಳು ಈ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿವೆ. ಹುತಾತ್ಮರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಇಂದು ಭದ್ರತಾ ಸಂಪುಟ ಸಮಿತಿ ಸಭೆ (ಸಿಸಿಎಸ್) ನಡೆಯಲಿದ್ದು, ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇದೀಗ ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುದು ಕುತೂಹಲವಾಗಿದ್ದು, ಎಲ್ಲರ ಚಿತ್ತ ಕೇಂದ್ರ ಸರ್ಕಾರದತ್ತ ನೆಟ್ಟಿದೆ. 


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ 9:30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ಕರೆದಿದ್ದಾರೆ. ಭಾರತದ ಮುಂದಿನ ನಡೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಿತ್ತ ಸಚಿವ ಪಿಯೂಷ್ ಗೋಯಲ್ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


2001ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತಿದೊಡ್ಡ ದಾಳಿ:
ಭದ್ರತಾ ಮತ್ತು ಕಾರ್ಯತಂತ್ರದ ವಿಷಯಗಳ ಬಗ್ಗೆ CCS ನಿರ್ಧರಿಸುತ್ತದೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌-ಎ-ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 44 ಯೋಧರು ಹುತಾತ್ಮರಾಗಿದ್ದಾರೆ. ಬಸ್‌ನಲ್ಲಿ ಇದ್ದ ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟಗೊಂಡ ಬಸ್‌ನಲ್ಲಿ 44 ಸಿಬ್ಬಂದಿ ಇದ್ದರು ಎನ್ನಲಾಗಿದೆ. 


2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಕಟ್ಟಡಕ್ಕೆ ಸ್ಫೋಟಕ ತುಂಬಿದ ವಾಹನ ನುಗ್ಗಿಸಿ ದಾಳಿ ಮಾಡಲಾಗಿತ್ತು. ಈ ಘಟನೆಯಲ್ಲಿ 38 ಜನರು ಮೃತಪಟ್ಟಿದ್ದರು. 2016ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ನಾಲ್ವರು ಉಗ್ರರು ನುಸುಳಿ ದಾಳಿ ನಡೆಸಿದ್ದರು. ಇದರಲ್ಲಿ 18 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ, ಗಡಿ ದಾಟಿ ಹೋಗಿದ್ದ ಭಾರತದ ಯೋಧರು ನಿರ್ದಿಷ್ಟ ದಾಳಿ ನಡೆಸಿ ಉಗ್ರರ ಹಲವು ಶಿಬಿರಗಳನ್ನು ನಾಶ ಮಾಡಿದ್ದಾರೆ. ಇದೀಗ 2019ರ ಫೆ.14ರಂದು ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆ ಸೇನಾ ವಾಹನದ ಮೇಲೆ ದಾಳಿ ಮಾಡಿದೆ. 2001ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ.


ಈ ದಾಳಿಯ ಬಗ್ಗೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಪಾಂಧರ್ಕವಾಡದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ರಾಜ್ಯ ಮಂತ್ರಿ ಹನ್ಸ್ರಾಜ್ ಅಹೀರ್, ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಹಲ್ಲೆ ನಡೆಸಿರುವುದು ಹೀನ ಕೃತ್ಯ, ಇದಕ್ಕೆ ಭಯೋತ್ಪಾದಕರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, "ಕಾಶ್ಮೀರದಲ್ಲಿ ನಮ್ಮ ಯೋಧರು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದಾರೆ. ಅದಕ್ಕಾಗಿಯೇ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ದೇಶದ ಜನತೆಗಾಗಿ ಯೋಧರು ಹುತಾತ್ಮರಾಗಿದ್ದಾರೆ. ಯೋಧರ ಈ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಸರ್ಕಾರ ಈ ದಾಳಿಯ ಬಗ್ಗೆ ಮೌನವಾಗಿರುವುದಿಲ್ಲ. ಇದಕ್ಕೆ ತಕ್ಕ ಉತ್ತರ ನೀಡೆ ನೀಡುತ್ತೇವೆ" ಎಂದಿದ್ದಾರೆ.