`ಇತ್ತೀಚೆಗಷ್ಟೇ ಹೊಸ ಸೀರೆ ಕೊಟ್ಟು ಹೋಗಿದ್ದ, ಅವನಿಲ್ಲದೆ ನಾ ಹೇಗೆ ಬದುಕಲಿ` ಹುತಾತ್ಮ ಯೋಧನ ತಾಯಿ
ಯೋಧ ಕೌಶಲ್ ಕುಮಾರ್ ರಾವತ್ ಹುತಾತ್ಮರಾದ ಸುದ್ದಿ ಕೇಳುತ್ತಿದ್ದಂತೆ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಯೋಧನ ಹೆತ್ತವರ ಕೂಗು ಮುಗಿಲು ಮುಟ್ಟಿದೆ.
ಆಗ್ರಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿನ ಭಯೋತ್ಪಾದಕ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಹುತಾತ್ಮರಾದವರಲ್ಲಿ ಆಗ್ರಾ ಮೂಲದ ಲಾಲ್ ಕೌಶಲ್ ಕುಮಾರ್ ರಾವತ್ ಕೂಡ ಒಬ್ಬರು. ಕೌಶಲ್ ಕುಮಾರ್ ರಾವತ್ ಹುತಾತ್ಮರಾದ ಸುದ್ದಿ ಕೇಳುತ್ತಿದ್ದಂತೆ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಯೋಧನ ಹೆತ್ತವರ ಕೂಗು ಮುಗಿಲು ಮುಟ್ಟಿದೆ.
ಇತ್ತೀಚೆಗಷ್ಟೇ ಹೊಸ ಸೀರೆ ಕೊಟ್ಟು ಹೋಗಿದ್ದ:
ಕೌಶಲ್ ಕುಮಾರ್ ರಾವತ್ ಇತ್ತೀಚೆಗಷ್ಟೇ ರಜೆಗಾಗಿ ಮನೆಗೆ ಬಂದಿದ್ದರು. ಮೂರು ದಿನಗಳ ಹಿಂದೆಯಷ್ಟೇ ತನ್ನ ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದ್ದರು ಎನ್ನಲಾಗಿದೆ. ಮಗ ಹುತಾತ್ಮರಾದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ದುಃಖ ಮನೆಮಾಡಿದೆ. 'ಇತ್ತೀಚೆಗಷ್ಟೇ ಹೊಸ ಸೀರೆ ಕೊಟ್ಟು ಹೋಗಿದ್ದ, ಅವನಿಲ್ಲದೆ ನಾ ಹೇಗೆ ಬದುಕಲಿ' ಎಂಬ ಆ ತಾಯಿಯ ಆಕ್ರಂದನ ಹೇಳತೀರದಂತಾಗಿದೆ.
1991 ರಲ್ಲಿ ಸಿಆರ್‌ಪಿಎಫ್ ಸೇರಿದ್ದ ಯೋಧ:
ಕೌಶಲ್ ಕುಮಾರ್ ರಾವತ್ ಮೂಲತಃ ತಾಜ್ ಗಂಜ್ ಕಹಾರಿ ಗ್ರಾಮದ ನಿವಾಸಿಯಾಗಿದ್ದು, 1991 ರಲ್ಲಿ ಸಿಆರ್‌ಪಿಎಫ್ ಸೇರಿದ್ದರು. 47 ವರ್ಷದ ಕೌಶಲ್ ಕುಮಾರ್ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿಯಿದ್ದಾರೆ. ಮಗಳಿಗೆ ವಿವಾಹವಾಗಿದ್ದು, ಪತ್ನಿ ಮಮತಾ ತಮ್ಮ ಕಿರಿಯ ಮಗನ ಜೊತೆ ಗುರ್ಗಾಂವ್ನಲ್ಲಿ ವಾಸಿಸುತ್ತಿದ್ದರು. ಕೌಶಲ್ ಕುಮಾರ್ ಅವರನ್ನು ಜನವರಿ ಕೊನೆ ವಾರದಲ್ಲಿ ಸಿಲಿಗುರಿ (ಪಶ್ಚಿಮ ಬಂಗಾಳ) ದಿಂದ ಜಮ್ಮು ಕಾಶ್ಮೀರಕ್ಕೆ ವರ್ಗಾಯಿಸಲಾಯಿತು. ವರ್ಗಾವಣೆ ಬಳಿಕ 15 ದಿನಗಳ ರಜೆಗಾಗಿ ತವರಿಗೆ ಮರಳಿದ್ದ ಅವರು ಫೆಬ್ರವರಿ 12 ರಂದು ಕರ್ತವ್ಯಕ್ಕೆ ಮರಳಿದ್ದರು ಎಂದು ಅವರ ಕುಟುಂಬ ತಿಳಿಸಿದೆ.