ನವದೆಹಲಿ: ವಿವಾದಾತ್ಮಕ ಟಿವಿ ಧಾರಾವಾಹಿಯ ಪ್ರಸಾರದ ವಿರುದ್ಧ ವಾಲ್ಮೀಕಿ ಸಮುದಾಯವು ಬಂದ್ ನಡೆಸಿದ್ದರಿಂದಾಗಿ ಪಂಜಾಬ್‌ನ ಕೆಲವು ಭಾಗಗಳಲ್ಲಿ ಶನಿವಾರ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಯಿತು.


COMMERCIAL BREAK
SCROLL TO CONTINUE READING

ಟಿವಿ ಧಾರಾವಾಹಿ 'ರಾಮ್ ಸಿಯಾ ಕೆ ಲುವ್ ಕುಶ್' ವಿರುದ್ಧ ವಾಲ್ಮೀಕಿ ಕ್ರಿಯಾ ಸಮಿತಿ ಕರೆದಿದ್ದ ಬಂದನಿಂದಾಗಿ ಮಾರುಕಟ್ಟೆಗಳು ಹೆಚ್ಚಾಗಿ ಮುಚ್ಚಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಧಾರಾವಾಹಿಯಲ್ಲಿ ಅವಹೇಳನಕಾರಿ ಟೀಕೆಗಳು ಮತ್ತು ವಿರೂಪಗೊಂಡ ಐತಿಹಾಸಿಕ ಸಂಗತಿಗಳು ಇದ್ದು, ಅವು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಸಮಿತಿ ದೂರಿದೆ.


ಧಾರಾವಾಹಿ ಪ್ರಸಾರವನ್ನು ದೇಶಾದ್ಯಂತ ನಿಷೇಧಿಸಬೇಕು ಮತ್ತು ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸಿದ್ದಕ್ಕೆ ಅದರ ನಿರ್ದೇಶಕರು ಮತ್ತು ಪಾತ್ರಧಾರಿಗಳನ್ನು ಭಾರತೀಯ ದಂಡ ಸಂಹಿತೆಯಡಿ ಬಂಧಿಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಇದಾದ ನಂತರ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಧಾರಾವಾಹಿಯ ಪ್ರಸಾರವನ್ನು ತಕ್ಷಣ ನಿಷೇಧಿಸುವಂತೆ ಆದೇಶಿಸಿದರು. ಅಲ್ಲದೆ ರಾಜ್ಯದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಯಾವುದೇ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು.


ಈಗ ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಉಪ ಆಯುಕ್ತರು ಆಯಾ ಜಿಲ್ಲೆಗಳಲ್ಲಿ ಕೇಬಲ್ ಆಪರೇಟರ್‌ಗಳು ಧಾರಾವಾಹಿ ಪ್ರಸಾರ ಮಾಡುವುದನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಜಲಂಧರ್, ಅಮೃತಸರ, ಹೋಶಿಯಾರ್ಪುರ್, ಕಪುರ್ಥಾಲಾ, ಫಾಗ್ವಾರಾ ಮತ್ತು ಫಿರೋಜ್ಪುರಗಳಲ್ಲಿ ವಾಣಿಜ್ಯ ಸಂಸ್ಥೆಗಳು ಮುಚ್ಚಲ್ಪಟ್ಟವು. ಈ ಕೆಲವು ಸ್ಥಳಗಳಲ್ಲಿ, ಅಂಗಡಿಗಳನ್ನು ಬಲವಂತವಾಗಿ ಮುಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಔಷಧಿ ಅಂಗಡಿಗಳು, ಚಿಕಿತ್ಸಾಲಯಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ನಡೆಸಲು ಅವಕಾಶ ನೀಡಲಾಯಿತು.