ಬಕ್ರೀದ್ ಪ್ರಯುಕ್ತ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಭೋಜನಾತಿಥ್ಯ ನೀಡಿದ ಪಂಜಾಬ್ ಸಿಎಂ
ಇಲ್ಲಿನ ರಾಜ್ಯ ಭವನದಲ್ಲಿ ಈದ್ ಅಲ್-ಅಧಾ ಪ್ರಯುಕ್ತ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸುಮಾರು 125 ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನಾತಿಥ್ಯ ನೀಡಿದರು.
ಚಂಡೀಗಢ: ಇಲ್ಲಿನ ರಾಜ್ಯ ಭವನದಲ್ಲಿ ಈದ್ ಅಲ್-ಅಧಾ ಪ್ರಯುಕ್ತ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸುಮಾರು 125 ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನಾತಿಥ್ಯ ನೀಡಿದರು.
ಈದ್ ಅಲ್-ಅಧಾ ಸಂದರ್ಭದಲ್ಲಿ ಮನೆಯಿಂದ ದೂರವಿರುವುದರಿಂದ ಪಂಜಾಬ್‌ನ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಭೋಜನವನ್ನು ಆಯೋಜಿಸಲಾಗಿತ್ತು. 370 ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಹೇರಿದ ನಿರ್ಬಂಧಗಳಿಂದಾಗಿ ಅವರು ಕಾಶ್ಮೀರಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.
ಇದೆ ಸಂದರ್ಭದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅಮರಿಂದರ್ ಸಿಂಗ್ ಕಾಶ್ಮೀರದಲ್ಲಿ ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುತ್ತವೆ ಎಂಬ ವಿಶ್ವಾಸವಿದೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. "ನಾವು ನಿಮ್ಮ ಕುಟುಂಬಗಳನ್ನು ಬದಲಿಸಲು ಸಾಧ್ಯವಿಲ್ಲ ಆದರೆ ನೀವು ನಮ್ಮನ್ನು ನಿಮ್ಮ ಕುಟುಂಬವೆಂದು ಪರಿಗಣಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.ಇದೆ ವೇಳೆ ಸಿಎಂ ಪಂಜಾಬ್‌ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಿದರು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ತಮ್ಮ ಎರಡನೇ ಮನೆ ಎಂದು ಕರೆದರು.
ಫೈಕ್ ಸೇಲಂ ಎಂಬ ವಿದ್ಯಾರ್ಥಿ 'ಪಂಜಾಬಿಗಳು ವಿಶಾಲ ಹೃದಯವನ್ನು ಹೊಂದಿದ್ದಾರೆಂದು ನಾವು ತಿಳಿದಿದ್ದೇವೆ' ಎಂದು ಹೇಳಿದರು, ತಮ್ಮ ಮಾತುಗಳನ್ನು ಕೇಳಿದ್ದಕ್ಕಾಗಿ ಅಮರಿಂದರ್ ಅವರಿಗೆ ಧನ್ಯವಾದ ಅರ್ಪಿಸಿದರು.ಇನ್ನೊಬ್ಬ ವಿದ್ಯಾರ್ಥಿ ಫರ್ಜಾನಾ ಹಫೀಜ್ 'ಇಂದು ಇಲ್ಲಿಗೆ ಬಂದಿರುವುದು ನಮ್ಮ ಕುಟುಂಬಗಳನ್ನು ನೆನಪಿಸುತ್ತದೆ ಎಂದು ಹೇಳಿದರು. ಈ ಆಹ್ವಾನವನ್ನು ಸ್ವೀಕರಿಸುವವರೆಗೂ ತಾವು ಒಂಟಿತನವನ್ನು ಅನುಭವಿಸುತ್ತಿರುವುದಾಗಿ ಅವರು ಒಪ್ಪಿಕೊಂಡರು.