Indian Navy officers return from Qatar celebration: ಕತಾರ್‌ನಲ್ಲಿ ದೋಹಾದ ನ್ಯಾಯಾಲಯದಿಂದ ಈ ಮೊದಲು ಮರಣದಂಡನೆ ಶಿಕ್ಷೆ ಘೋಷಿಸಲಾಗಿದ್ದ ಎಂಟು ಜನ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆಗೊಳಿಸಿರುವುದು ಭಾರತದ ಪಾಲಿನ ಅತಿದೊಡ್ಡ ರಾಜತಾಂತ್ರಿಕ ಗೆಲುವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ಎಂಟು ಮಂದಿ ಯೋಧರಲ್ಲಿ ಏಳು ಜನ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದಿದೆ. ಭಾರತ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ ಬಳಿಕ, ಮೊದಲು ಅವರಿಗೆ ಘೋಷಿಸಲಾಗಿದ್ದ ಮರಣದಂಡನೆಯನ್ನು ಕಡಿಮೆಗೊಳಿಸಿ, ದೀರ್ಘಾವಧಿಯ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು.


COMMERCIAL BREAK
SCROLL TO CONTINUE READING

ಶಿಕ್ಷೆಗೊಳಗಾಗಿದ್ದ ಎಂಟು ಜನ ಯೋಧರಲ್ಲಿ, ಕೇವಲ ಕಮಾಂಡರ್ ಪೂರ್ಣೇಂದು ತಿವಾರಿ ಮಾತ್ರವೇ ಭಾರತಕ್ಕೆ ಮರಳಲು ಬಾಕಿಯಿದೆ. ಕಮಾಂಡರ್ ತಿವಾರಿ ಅವರು ಇತರ ಯೋಧರೊಡನೆಯೇ ಕಾರಾಗೃಹದಿಂದ ಬಿಡುಗಡೆಗೊಂಡಿದ್ದರೂ, ಅವರು ಯಾಕೆ ಇನ್ನೂ ಭಾರತಕ್ಕೆ ಮರಳಿಲ್ಲ ಎನ್ನುವುದು ತಿಳಿದು ಬಂದಿಲ್ಲ. ಆದರೆ, ಕಮಾಂಡರ್ ಪೂರ್ಣೇಂದು ತಿವಾರಿ ಅವರು ಶೀಘ್ರದಲ್ಲೇ ಭಾರತಕ್ಕೆ ಮರಳುವ ನಿರೀಕ್ಷೆಗಳಿವೆ.


ಭಾರತಕ್ಕೆ ನೈಸರ್ಗಿಕ ಅನಿಲವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುವ ರಾಷ್ಟ್ರವಾಗಿರುವ ಕತಾರ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ನೆಲೆಸಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಭಾರತದ ಬಳಿ ಇರುವ ಮಾಹಿತಿಗಳ ಪ್ರಕಾರ, ಕತಾರ್‌ನ ಕಾರಾಗೃಹಗಳಲ್ಲಿ ಅಂದಾಜು 750 ಜನರು ಸೆರೆಯಾಳುಗಳಾಗಿದ್ದಾರೆ.


"ನಾವು ಭಾರತಕ್ಕೆ ಮರಳುವುದನ್ನೇ ಎದುರು ನೋಡುತ್ತಾ 18 ತಿಂಗಳು ಕಾದಿದ್ದೇವೆ. ಈ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ಕೃತಜ್ಞರಾಗಿದ್ದೇವೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸದಿದ್ದರೆ, ಕತಾರ್ ಜೊತೆಗೆ ಅವರ ಸಂಬಂಧ ಉತ್ತಮವಾಗಿರದಿದ್ದರೆ, ಖಂಡಿತವಾಗಿಯೂ ನಾವು ಭಾರತಕ್ಕೆ ಮರಳಲು ಸಾಧ್ಯವಿರಲಿಲ್ಲ. ನಾವು ಭಾರತದ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ. ಸರ್ಕಾರದ ಪ್ರಯತ್ನಗಳ ಹೊರತಾಗಿ, ನಾವು ಭಾರತಕ್ಕೆ ಮರಳುವ ದಿನ ಬರುತ್ತಿರಲಿಲ್ಲ" ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.


ಯಾರು ಈ ಎಂಟು ಜನ ಭಾರತೀಯ ನೌಕಾಪಡೆಯ ಅಧಿಕಾರಿಗಳು?
ಡಿಸೆಂಬರ್ 28ರಂದು, ಕತಾರ್‌ನ ಕೋರ್ಟ್ ಆಫ್ ಅಪೀಲ್ ಅಕ್ಟೋಬರ್ ತಿಂಗಳಲ್ಲಿ ದೋಹಾದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂಟು ಜನರಿಗೆ ಘೋಷಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೈಲು ಶಿಕ್ಷೆಗೆ ಕಡಿಮೆಗೊಳಿಸಿತು. ಅವರಿಗೆ ಮೂರು ವರ್ಷದಿಂದ 25 ವರ್ಷಗಳ ತನಕ ವಿವಿಧ ಅವಧಿಯ ಕಾರಾಗೃಹ ಶಿಕ್ಷೆ ಘೋಷಿಸಲಾಯಿತು.


ಕತಾರ್ ರಾಜಧಾನಿ ದೋಹಾದಲ್ಲಿರುವ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಕತಾರ್‌ನ ಮಿಲಿಟರಿ ಮತ್ತು ಭದ್ರತಾ ತಂಡಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿತ್ತು.


ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ಕ್ಯಾಪ್ಟನ್ ನವ್‌ತೇಜ್ ಗಿಲ್ ಮತ್ತು ಸೌರಭ್ ವಸಿಷ್ಠ, ಕಮಾಂಡರ್ ಪೂರ್ಣೇಂದು ತಿವಾರಿ, ಅಮಿತ್ ನಾಗ್‌ಪಾಲ್, ಎಸ್ ಕೆ ಗುಪ್ತಾ, ಬಿ ಕೆ ವರ್ಮಾ, ಸುಗುಣಾಕರ್ ಪಾಕಾಲ, ಮತ್ತು ಸೈಲರ್ ರಾಗೇಶ್ ಅವರನ್ನು ಆಗಸ್ಟ್ 2022ರಲ್ಲಿ ಬಂಧಿಸಲಾಗಿತ್ತು. ಆದರೆ ಅವರ ವಿರುದ್ಧದ ಆರೋಪಗಳೇನು ಎನ್ನುವುದನ್ನು ಸಾರ್ವಜನಿಕಗೊಳಿಸಲಾಗಿಲ್ಲ.


ಬಂಧಿತರಾಗಿದ್ದ ಎಂಟು ಯೋಧರಲ್ಲಿ, ಕ್ಯಾಪ್ಟನ್ ನವ್‌ತೇಜ್ ಗಿಲ್ ಅವರಿಗೆ ನೇವಲ್ ಅಕಾಡೆಮಿಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ರಾಷ್ಟ್ರಪತಿಗಳ ಸ್ವರ್ಣ ಪದಕ ನೀಡಲಾಗಿದೆ. ಅವರು ತಮಿಳುನಾಡಿನ ವೆಲ್ಲಿಂಗ್ಟನ್ ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಈ ಕುರಿತು ಮಾಹಿತಿ ನೀಡಿದ ಅನಾಮಧೇಯ ಮೂಲಗಳ ಪ್ರಕಾರ, ಪೂರ್ಣೇಂದು ತಿವಾರಿ ಅವರಿಗೆ 25 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದ್ದರೆ, ರಾಗೇಶ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಅಧಿಕಾರಿಗಳ ಪೈಕಿ ನಾಲ್ವರಿಗೆ ತಲಾ ಹದಿನೈದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಇನ್ನುಳಿದ ಇಬ್ಬರು ಯೋಧರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಘೋಷಿಸಲಾಗಿತ್ತು.


ಹಲವು ವರದಿಗಳ ಪ್ರಕಾರ, ಈ ಅಧಿಕಾರಿಗಳ ವಿರುದ್ಧ ಬೇಹುಗಾರಿಕೆ ನಡೆಸಿದ ಆರೋಪ ಹೊರಿಸಲಾಗಿತ್ತಾದರೂ, ಕತಾರ್ ಅಧಿಕಾರಿಗಳಾಗಲಿ, ಭಾರತೀಯ ಅಧಿಕಾರಿಗಳಾಗಲಿ ಈ ಆರೋಪಗಳ ಕುರಿತ ನಿರ್ದಿಷ್ಟ ಮಾಹಿತಿಗಳನ್ನು ಹಂಚಿಕೊಂಡಿರಲಿಲ್ಲ.


ಭಾರತೀಯ ಯೋಧರನ್ನು ಮರಳಿ ತರಲು ಭಾರತದ ಪ್ರಯತ್ನಗಳು: 
ಭಾರತ ಈ ಮೊದಲು ಕತಾರಿ ನ್ಯಾಯಾಲಯ ಭಾರತೀಯ ನಿವೃತ್ತ ಯೋಧರಿಗೆ ಮರಣದಂಡನೆ ಘೋಷಿಸಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿತ್ತು. ತನ್ನ ಎಂಟು ಜನ ನೌಕಾಪಡೆಯ ಸಿಬ್ಬಂದಿಗಳಿಗೆ ನೆರವು ನೀಡಲು ತನ್ನ ಮುಂದಿರುವ ಎಲ್ಲ ಕಾನೂನು ಆಯ್ಕೆಗಳನ್ನು ಪರಿಶೀಲಿಸುವುದಾಗಿ ಹೇಳಿತ್ತು. ಅವರಲ್ಲಿ ಭಾರತೀಯ ನೌಕಾಪಡೆಯ ಪ್ರಮುಖ ಯುದ್ಧ ನೌಕೆಗಳನ್ನು ಮುನ್ನಡೆಸಿದ ಅಧಿಕಾರಿಗಳೂ ಇದ್ದರು.


ಭಾರತ ಕತಾರ್ ನ್ಯಾಯಾಲಯ ಘೋಷಿಸಿದ ಮರಣದಂಡನೆ ಶಿಕ್ಷೆಯ ವಿರುದ್ಧ ಡಿಸೆಂಬರ್ 28ರಂದು ಮೇಲ್ಮನವಿ ಸಲ್ಲಿಸಿತು. ಇದರ ಬಳಿಕ, ಕತಾರಿ ನ್ಯಾಯಾಲಯ ಮರಣದಂಡನೆಯನ್ನು ಕಾರಾಗೃಹ ಶಿಕ್ಷೆಗೆ ಬದಲಿಸಿತು.


ಕತಾರ್‌ನಲ್ಲಿ ಶಿಕ್ಷೆಗೆ ಗುರಿಯಾದ ನೌಕಾಪಡೆಯ ಸಿಬ್ಬಂದಿಗಳ ಕುಟುಂಬಸ್ಥರು ಗಾಬರಿಗೊಳಗಾಗಿ, ಆ ನಿವೃತ್ತ ಯೋಧರ ಬಿಡುಗಡೆ ಮತ್ತು ಭಾರತಕ್ಕೆ ಮರಳಿ ಕರೆಸಿಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು. ಭಾರತೀಯ ವಿದೇಶಾಂಗ ಸಚಿವಾಲಯ ಅವರಿಗೆ ಎಲ್ಲ ರೀತಿಯ ಕಾನೂನು ನೆರವು ನೀಡುವ, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರುವ ಸರ್ವ ಪ್ರಯತ್ನ ನಡೆಸುವ ಭರವಸೆ ನೀಡಿತು.


ಪ್ರಧಾನಿ ನರೇಂದ್ರ ಮೋದಿಯವರು ಕತಾರ್ ಎಮಿರ್ ಶೇಖ್ ತಮಿಮ್ ಬಿನ್ ಹಮಾದ್ ಅಲ್ ತಾನಿ ಅವರನ್ನು ಸಿಒಪಿ28 ಸಮಾವೇಶದಲ್ಲಿ ಭೇಟಿಯಾದ ಬೆನ್ನಲ್ಲೇ ಕತಾರ್ ನ್ಯಾಯಾಲಯ ಕೈಗೊಂಡ ನಿರ್ಣಯವನ್ನು ಭಾರತದ ಮಹತ್ವದ ರಾಜತಾಂತ್ರಿಕ ಗೆಲುವು ಎಂಬುದಾಗಿ ಪರಿಗಣಿಸಲಾಗಿದೆ. ಡಿಸೆಂಬರ್ 1ರಂದು ನಡೆದ ಭೇಟಿಯ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರು ನಾವು ಕತಾರ್‌ನಲ್ಲಿರುವ ಭಾರತೀಯರ ಕ್ಷೇಮದ ಕುರಿತು ಚರ್ಚೆ ನಡೆಸಿರುವುದಾಗಿ ಹೇಳಿದ್ದರು.


ಜನವರಿ ತಿಂಗಳಲ್ಲಿ, ಮೇಲ್ಮನವಿ ನ್ಯಾಯಾಲಯ ಎಂಟು ಜನ ಭಾರತೀಯ ನೌಕಾಪಡೆಯ ಮಾಜಿ ಯೋಧರಿಗೆ ತಮಗೆ ಮರಣದಂಡನೆಯ ಬದಲಿಗೆ ನೀಡಿರುವ ಜೈಲು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಧಿ ನೀಡಿತು ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.


ನ್ಯಾಯಾಲಯ ಮೌಖಿಕವಾಗಿ ತನ್ನ ತೀರ್ಪು ನೀಡಿದ್ದು, ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣ್‌ಧೀರ್ ಜೈಸ್ವಾಲ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ವಕೀಲರು ಎಂಟು ಜನರಿಗೆ ನೀಡಿರುವ ಶಿಕ್ಷೆಯ ಆದೇಶದ ಲಿಖಿತ ವರದಿ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದು, ಅದೊಂದು ರಹಸ್ಯ ದಾಖಲೆಯಾಗಿದೆ ಎಂದಿದ್ದರು.


ಕತಾರ್ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ ಭಾರತ ಸರ್ಕಾರ: 
ಫೆಬ್ರವರಿ 12ರಂದು, ಭಾರತ ಸರ್ಕಾರ ಒಂದು ಅಧಿಕೃತ ಹೇಳಿಕೆ ನೀಡಿದ್ದು, ತನ್ನ ನೌಕಾಪಡೆಯ ನಿವೃತ್ತ ಅಧಿಕಾರಿಗಳ ಬಿಡುಗಡೆಯ ನಿರ್ಧಾರವನ್ನು ಸ್ವಾಗತಿಸಿದೆ. "ಭಾರತ ಸರ್ಕಾರ, ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದು, ಕತಾರ್‌ನಲ್ಲಿ ಬಂಧಿಸಲ್ಪಟ್ಟಿದ್ದ ಎಂಟು ಜನ ಭಾರತೀಯರ ಬಿಡುಗಡೆಯಿಂದ ಸಂತಸಗೊಂಡಿದೆ. ಅವರ ಪೈಕಿ ಏಳು ಜನರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಅವರನ್ನು ಸ್ವದೇಶಕ್ಕೆ ಮರಳಲು ಅನುಮತಿ ನೀಡಿರುವ ಕತಾರ್‌ನ ಆಮಿರ್ ಅವರ ನಿರ್ಧಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ" ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.