ನವದೆಹಲಿ: ಪ್ರಾನ್ಸ್ ನಿಂದ ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು 2016ರಲ್ಲಿ ಸರ್ಕಾರ ಮಾಡಿಕೊಂಡಿರುವ ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಮಾಜಿ ಕೇಂದ್ರ ಸಚಿವರಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಈ ಮೂವರೂ ನಾಯಕರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ. 58,000 ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಫ್ರಾನ್ಸ್ ನೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದವು ಭಾರತೀಯ ರಕ್ಷಣಾ ಇಲಾಖೆಯ ಅತಿದೊಡ್ಡ ಹಗರಣ ಎಂದು ಹೇಳಿದ್ದು, ಸಿಎಜಿಯಿಂದ ಸಂಪೂರ್ಣ ವ್ಯವಹಾರದ ಲೆಕ್ಕ ಪರಿಶೋಧನೆಗೆ ಆಗ್ರಹಿಸಿದರು.


ರಫೇಲ್ ಹಗರಣದ ಕುರಿತು ಸ್ವತಂತ್ರ ತನಿಖಾ ವರದಿಗಳನ್ನು ಮಾಡುವ ಮಾಧ್ಯಮಗಳ ಪ್ರಯತ್ನವನ್ನು ತಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸರಣಿ ಹೇಳಿಕೆಗಳ ಬೆನ್ನಲ್ಲೇ ಬಿಜೆಪಿಯ ಉಭಯ ಮಾಜಿ ಕೇಂದ್ರ ಸಚಿವರು ರಫೇಲ್ ವಿರುದ್ಧ ದಾಳಿ ನಡೆಸಿದ್ದಾರೆ.


1986ರ ಬೊಫೋರ್ಸ್ ಹಗರಣದ ಬಗ್ಗೆ ವರದಿ ಮಾಡಿದವರಲ್ಲಿ ಅಗ್ರಸ್ಥಾನದಲ್ಲಿದ್ದ, ಬಿಜೆಪಿಗೆ ಸೇರುವ ಮುನ್ನ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಅರುಣ್ ಶೌರಿ, ಬೊಫೋರ್ಸ್ ಗೆ ಸಂಬಂಧಿಸಿದ್ದ ವಿಷಯವನ್ನು ನಿಭಾಯಿಸಿದ್ದ ವ್ಯಕ್ತಿಯಾಗಿ ತಾನು ಇಷ್ಟು ಹೇಳಬಲ್ಲೇ, ರಫೇಲ್ ಗೆ ಹೋಲಿಸಿದರೆ ಬೊಫೋರ್ಸ್ ಹಗರಣ ಏನೇನೂ ಅಲ್ಲ. ಬೊಫೋರ್ಸ್ ವಿರುದ್ಧ ಬಿಜೆಪಿ ಧ್ವನಿಯೆತ್ತಿದ್ದ ಮಾದರಿಯಲ್ಲೇ ಈಗ ಪ್ರತಿಪಕ್ಷಗಳು ರಫೇಲ್ ವಿರುದ್ಧ ದನಿಯೆತ್ತಬೇಕು ಎಂದು ಹೇಳಿದರು. 


ವಿಮಾನದ ತಾಂತ್ರಿಕ ಮತ್ತು ಕಾರ್ಯಾಚರಣೆ ಸಾಮರ್ಥ್ಯವನ್ನಷ್ಟೇ ಬಹಿರಂಗ ಪದಇಸಬಾರು ಎಂಬುದು ಫ್ರಾನ್ಸ್ ಜತೆಗಿನ ಒಪ್ಪಂದಲ್ಲಿರುವ ಅಂಶ. ಆದರೆ ವಿಮಾನದ ದರದ ಮಾಹಿತಿ ಬಹಿರಂಗಪಡಿಸಬಾರದು ಎಂಬ ಒಪ್ಪಂದವಿಲ್ಲ ಎಂದು ಶೌರಿ ಹೇಳಿದರೆ, ಒಪ್ಪಂದದ ವಿವರಗಳನ್ನು ಬಹಿರಂಗಗೊಳಿಸಿದರೆ ತನ್ನ ಆಟವು ಮುಗಿಯುತ್ತದೆ ಎಂದು ಸರ್ಕಾರಕ್ಕೆ ಗೊತ್ತಿರುವುದರಿಂದ ಅದು ಗೌಪ್ಯತೆ ನಿಬಂಧನೆಯ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.


ರಫೆಲ್ ಯುದ್ಧ ವಿಮಾನ ಒಪ್ಪಂದದ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಹಿತಕ್ಕಾಗಿ ಮಾಡಿಕೊಂಡ ಅಂತರ ಸರ್ಕಾರ ಒಪ್ಪಂದ ಇದಾಗಿದೆ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಆದ ಒಪ್ಪಂದದ ವಾಸ್ತವಾಂಶಗಳನ್ನು ತಿರುಚಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದರು.




2016ರಲ್ಲಿ ಅಂತರ ಸರ್ಕಾರ ಒಪ್ಪಂದದಲ್ಲಿ ಪ್ರಕ್ರಿಯೆಗಳನ್ನು ಅನುಸರಿಸಲಾಗಿದ್ದು, ದೇಶದ ಜನರ ಹಿತಕ್ಕಾಗಿ ಮಾಡಿಕೊಂಡ ಒಪ್ಪಂದವಾಗಿದೆ. ಆಧಾರವಿಲ್ಲದ ಆರೋಪಗಳ ಮೂಲಕ ಸರ್ಕಾರದ ವರ್ಚಸ್ಸನ್ನು ಕುಂದಿಸಲು ಮಾಡುವ ಯತ್ನ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದರು.