ಲೋಕಸಭಾ ಚುನಾವಣೆ: ಕೇರಳದ ವಾಯ್ನಾಡ್ ನಿಂದ ಸ್ಪರ್ಧಿಸಲು ಒಪ್ಪಿಗೆ ನೀಡಿದ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಥಿ ಜೊತೆಗೆ ಕೇರಳದ ವಾಯ್ನಾಡ್ ನಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಭಾನುವಾರ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಥಿ ಜೊತೆಗೆ ಕೇರಳದ ವಾಯ್ನಾಡ್ ನಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಭಾನುವಾರ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ "ರಾಹುಲ್ ಜಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಅವರು ಕೇರಳದ ವಾಯ್ನಾಡಿನಿಂದ ಸ್ಪರ್ಧಿಸಲಿದ್ದಾರೆ ಎಂದು ನಿಮಗೆ ತಿಳಿಸಲು ಬಹಳ ಸಂತೋಷವಾಗಿದೆ. ದಕ್ಷಿಣದ ಎಲ್ಲಾ ರಾಜ್ಯಗಳು ಕಾಂಗ್ರೆಸ್ ಅಧ್ಯಕ್ಷರನ್ನು ತಮ್ಮ ರಾಜ್ಯಗಳಿಂದ ಸ್ಪರ್ಧಿಸಲು ಮನವಿ ಮಾಡಿದ್ದವು. ಸಾಕಷ್ಟು ಚರ್ಚೆಗಳ ನಂತರ ಈಗ ರಾಹುಲ್ ಗಾಂಧಿ ಅವರು ವಾಯ್ನಾಡ್ ನಿಂದ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ, ಈ ಕ್ಷೇತ್ರ ಕರ್ನಾಟಕ ಮತ್ತು ತಮಿಳುನಾಡುಗಳೊಂದಿಗೆ ತನ್ನ ಗಡಿಪ್ರದೇಶವನ್ನು ಹಂಚಿಕೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಅಮೇಥಿ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ತಮ್ಮ ರಾಜಕೀಯ ಜೀವನದಲ್ಲಿ ಎರಡು ಕ್ಷೇತ್ರದಲ್ಲಿ ರಾಜಕೀಯ ಅದೃಷ್ಟ ಪರೀಕ್ಷೆ ಒಳಪಡಿಸಲು ಮುಂದಾಗಿದ್ದಾರೆ.ಈ ನಿರ್ಧಾರಕ್ಕೆ ವ್ಯಂಗ್ಯವಾಡಿರುವ ಸ್ಮೃತಿ ಇರಾನಿ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲುವುದು ಸ್ಪಷ್ಟವಾಗಿದೆ.ಈ ಹಿನ್ನಲೆಯಲ್ಲಿ ಅವರು ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರು.
ಈ ಟೀಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ "ನರೇಂದ್ರ ಮೋದಿ ಗುಜರಾತನ್ನು ತೊರೆದಾಗ ಇದೇ ರೀತಿ ಆರೋಪಗಳನ್ನು ಮಾಡಲಾಗಿದ್ದು.ಸ್ಮೃತಿ ಇರಾನಿ ಅವರು ಚಾಂದನಿ ಚೌಕ್ ಮತ್ತು ಅಮೇಥಿಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಈಗ ಅವರು ಅಮೇತಿಯಲ್ಲಿ ಮತ್ತೊಮ್ಮೆ ಸೋಲಲು ಮುಂದಾಗಿದ್ದಾರೆ ಎಂದರು.