ಕೇಂದ್ರ ಸರ್ಕಾರದ ಲೋಕಪಾಲ ನೇಮಕಾತಿಯ ವಿಳಂಬ ನೀತಿಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ
ನವದೆಹಲಿ: ಲೋಕಪಾಲರ ನೇಮಕಾತಿಯಲ್ಲಿ ಮೋದಿ ನೇತೃತ್ವದ ಸರ್ಕಾರವು ಮಾಡುತ್ತಿರುವ ವಿಳಂಬವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ನಾಲ್ಕು ವರ್ಷಗಳು ನಡೆದಿವೆ, ಆದರೆ ಲೋಕಪಾಲ್ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಆದ್ದರಿಂದ ಎಲ್ಲಿ ತನಕ ನೀವು ಸುಳ್ಳಿನ ಆಟ ಆಡುತ್ತೀರಿ ? ಎನ್ನುವ ಒಂದೇ ಒಂದು ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವದ ರಕ್ಷಕರು' ಮತ್ತು 'ಜವಾಬ್ದಾರಿಯುತ ನಾಯಕರಿಗೆ ಇದು ಕೇಳಿಸುತ್ತಿದೆಯೇ ? ಎಂದು ಟ್ವೀಟ್ ಮೂಲಕ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರು ಲೋಕಪಾಲರನ್ನು ನೇಮಕ ಮಾಡದೆ ಇರುವುದಕ್ಕೆ ಈ ರೀತಿ ವ್ಯಂಗವಾಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಡಿಸೆಂಬರ್ 2013ರಲ್ಲಿ ಅಂಗಿಕಾರವಾಗಿದ್ದ ಮಸೂದೆಯ ಕುರಿತಾಗಿ ಲೋಕಪಾಲ ಮಸೂದೆ ಅಂಗೀಕರಿಸುವಲ್ಲಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯ ಪಾತ್ರದ ಕುರಿತಾಗಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಮೋದಿ ಮಾಡಿರುವ ಟ್ವೀಟ್ ಅನ್ನು ಸಹ ರಾಹುಲ್ ಗಾಂಧೀ ತಮ್ಮ ಟ್ವೀಟ್ ನಲ್ಲಿ ಹೈಲೈಟ್ ಮಾಡಿದ್ದಾರೆ.
2013 ರ ಲೋಕಪಾಲ ಮತ್ತು ಲೋಕಾಯುಕ್ತರ ಅಧಿನಿಯಮದಲ್ಲಿ, ಸಾರ್ವಜನಿಕ ಇಲಾಖೆಗಳಲ್ಲಿ ಭ್ರಷ್ಟಾಚಾರದ ಆರೋಪಗಳ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳಲ್ಲಿ ತನಿಖಾಧಿಕಾರಿಗಳನ್ನು ನೇಮಕ ಮಾಡಬೇಕು ಎಂಬ ನಿಯಮಾವಳಿ ಇದೆ.