ರಾಹುಲ್ ಗಾಂಧಿ ಜನ್ಮತಃ ಭಾರತದ ಪ್ರಜೆ: ಕಾಂಗ್ರೆಸ್
ರಾಹುಲ್ ಗಾಂಧಿ ಪೌರತ್ವದ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಕೇಂದ್ರ ಗೃಹ ಇಲಾಖೆ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದು, 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನ್ಮತಃ ಭಾರತೀಯ ಪ್ರಜೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿದೆ.
ಪೌರತ್ವಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಹೇಳಿಕೆ ನೀಡಿದ್ದು, ನಿರುದ್ಯೋಗ, ಕೃಷಿ ಸಮಸ್ಯೆ ಮತ್ತು ಇತರ ಸಮಸ್ಯೆಗಳ ಬಗೆಗಿನ ಚರ್ಚೆಗಳನ್ನು ಮುಚ್ಚಿಹಾಕಲು ಈ ಆರೋಪ ಮಾಡಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ, ರಾಹುಲ್ ಜನ್ಮತಃ ಭಾರತೀಯ ನಾಗರಿಕ ಎಂಬುದು ಇಡೀ ವಿಶ್ವಕ್ಕೇ ತಿಳಿದಿದೆ. ನಿರುದ್ಯೋಗ, ಕೃಷಿ ಬಿಕ್ಕಟ್ಟು ಮತ್ತು ಕಪ್ಪು ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗೆಗಿನ ಪ್ರಶ್ನೆಗೆ ಮೋದಿ ಬಳಿ ಉತ್ತರವಿಲ್ಲ. ಇಂತಹ ಸನ್ನಿವೇಶದಲ್ಲಿ, ದೇಶದ ಗಮನ ಸೆಳೆಯಲು ತನ್ನ ಸರ್ಕಾರದ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಷ್ಟಕ್ಕೂ, ರಾಹುಲ್ ಗಾಂಧಿ ಪೌರತ್ವದ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಕೇಂದ್ರ ಗೃಹ ಇಲಾಖೆ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದು, 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ. 2003ರಲ್ಲಿ ಬ್ರಿಟನ್ನಿನ ಬ್ಯಾಕಪ್ಸ್ ಲಿಮಿಟೆಡ್ ಕಂಪನಿಯ ನಿರ್ದೇಶಕ ಹಾಗೂ ಕಾರ್ಯದರ್ಶಿಯಾಗಿ ರಾಹುಲ್ ಗಾಂಧಿ ಕಾರ್ಯನಿರ್ವಹಿಸಿದ್ದು, ಅಲ್ಲಿ ಬ್ರಿಟಿಷ್ ಪೌರತ್ವ ಹೊಂದಿರುವುದಾಗಿ ನಮೂದಿಸಲಾಗಿದೆ ಎಂದು ಬಿಜೆಪಿ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.