ನವದೆಹಲಿ: ಬಿಜೆಪಿಗೆ ವಿರೋಧಿ ಅಲೆ ಹೆಚ್ಚುತ್ತಿದ್ದು ಈ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂದು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಪಿಟಿಐ ಜೊತೆ ಮಾತನಾಡುತ್ತಾ ತಿಳಿಸಿದ ವೀರಪ್ಪ ಮೊಯಿಲಿ "ನಾನು ಹೇಳುವುದಿಷ್ಟೇ ಅಂತಿಮವಾಗಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ" ಎಂದು ಹೇಳಿದರು.ಬಿಜೆಪಿ ವಿರೋಧಿ ಮೈತ್ರಿಕೂಟ ರಾಹುಲ್ ಗಾಂಧಿಯವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿದೆಯೇ ಎನ್ನುವುದಕ್ಕೆ ಉತ್ತರಿಸುತ್ತಾ ಮೊಯಿಲಿ ತಿಳಿಸಿದರು.


ಇದೇ ವೇಳೆ ತೆಲುಗು ದೇಶಂ ಪಕ್ಷ (ಟಿಡಿಪಿ) ಮುಖಂಡ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿರೋಧ ಪಕ್ಷಗಳನ್ನು ಒಂದುಗೂಡಿಸಲು "ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಮೊಯಿಲಿ ತಿಳಿಸಿದರು.


ತೆಲಂಗಾಣದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ನೆಲೆ ಕಂಡುಕೊಳ್ಳುತ್ತಿದೆ. ಆದರೆ ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಪಾಲುದಾರರನ್ನು ಕಳೆದುಕೊಂಡಿದೆ ಎಂದರು.


ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ಗಢ ಮತ್ತು ಮಿಜೋರಾಂ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ಮೊಯಿಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ