ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ಆತ್ಮಹತ್ಯೆಗೆ ಸಮ: ಲಾಲೂ ಪ್ರಸಾದ್ ಯಾದವ್
ಚುನಾವಣೆಯ ಫಲಿತಾಂಶದೊಂದಿಗೆ ದೇಶದ ವಾಸ್ತವತೆಯು ಬದಲಾಗುವುದಿಲ್ಲ ಎಂದು ಲಾಲು ಯಾದವ್ ತನ್ನ ಟ್ವೀಟ್ನಲ್ಲಿ ಬರೆದಿದ್ದಾರೆ.
ಪಾಟ್ನಾ: ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆಗೆ ತೀರ್ಮಾನಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ರಾಹುಲ್ ನಿರ್ಧಾರವನ್ನು ಅನುಮೋದಿಸಿಲ್ಲವಾದರೂ ರಾಜೀನಾಮೆ ಬಗ್ಗೆ ರಾಹುಲ್ ತಮ್ಮ ಬಿಗಿಪಟ್ಟು ಸಡಿಲಿಸಿಲ್ಲ. ಈ ಬಗ್ಗೆ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪ್ರತಿಕ್ರಿಯಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನಿರ್ಧಾರ ಆತ್ಮಹತ್ಯೆಗೆ ಸಮ ಎಂದು ಬಣ್ಣಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಲಾಲೂ ಪ್ರಸಾದ್ ಯಾದವ್, "ರಾಹುಲ್ ಗಾಂಧಿಯವರು ರಾಜೀನಾಮೆ ನೀಡುತ್ತಿರುವುದು ಆತ್ಮಹತ್ಯೆಗೆ ಸಮನಾದುದು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳದಂತೆ ತಡೆಯುವುದು ಎಲ್ಲಾ ಪ್ರತಿಪಕ್ಷಗಳ ಏಕೈಕ ಗುರಿಯಾಗಿತ್ತು. ಆದರೆ, ಭಾರತೀಯ ಜನತಾ ಪಕ್ಷದ ವೈಫಲ್ಯಗಳು ಮತ್ತು ಬಿಜೆಪಿಯನ್ನು ಏಕೆ ಅಧಿಕಾರದಿಂದ ದೂರ ಇಡಬೇಕು ಎಂಬುದನ್ನು ಮತದಾರರಿಗೆ ಮನವರಿಕೆ ಮಾಡುವುದರಲ್ಲಿ ಹಾಗೂ ರಾಷ್ಟ್ರೀಯ ಅಭಿಪ್ರಾಯವನ್ನು ಮೂಡಿಸುವುದರಲ್ಲಿ ವಿರೋಧ ಪಕ್ಷಗಳು ವಿಫಲವಾಗಿವೆ" ಎಂದು ಬರೆದಿದ್ದಾರೆ.
ಚುನಾವಣೆಯ ಫಲಿತಾಂಶದೊಂದಿಗೆ ದೇಶದ ವಾಸ್ತವತೆಯು ಬದಲಾಗುವುದಿಲ್ಲ ಎಂದಿರುವ ಲಾಲೂ ಪ್ರಸಾದ್ ಯಾದವ್, ಒಂದು ವೇಳೆ ಗಾಂಧಿಯೇತರ ಕುಟುಂಬದವರನ್ನು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಕೂರಿಸಿದರೆ ಮುಂಬರುವ ಚುನಾವಣೆವರೆಗೂ ಬಿಜೆಪಿಗೆ ಕಾಂಗ್ರೆಸ್ ಟೀಕಿಸಲು ಹೊಸ ಅಸ್ತ್ರ ನಾವಾಗಿಯೇ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.