ನವದೆಹಲಿ: ಕರ್ನಾಟಕದಲ್ಲಿ ಆಗುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗೂ, ಕಾಂಗ್ರೆಸ್ ಶಾಸಕರ ರಾಜೀನಾಮೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆಲ್ಲಾ ರಾಹುಲ್ ಗಾಂಧಿಯೇ ಹೊಣೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಕರ್ನಾಟಕದ ಸಮ್ಮಿಶ್ರ ಸರ್ಕಾರದ 21 ಸಚಿವರು ರಾಜೀನಾಮೆ ಬೆನ್ನಲ್ಲೇ ಇಂದು ಲೋಕಸಭೆಯಲ್ಲೂ ಸಹ ಈ ವಿಚಾರ ಪ್ರತಿಧ್ವನಿಸಿದ ವೇಳೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಕರ್ನಾಟಕದ ರಾಜಕೀಯ ಬೆಳವಣಿಗೆಗೂ, ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಪಕ್ಷ ಎಂದಿಗೂ ಕುದುರೆ ವ್ಯಾಪಾರದಲ್ಲಿ ತೊಡಗಿಲ್ಲ. ಸಂಸದೀಯ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡುವಲ್ಲಿ ನಾವು ಬದ್ಧರಾಗಿದ್ದೇವೆ. ರಾಜೀನಾಮೆ ಸಲ್ಲಿಸುವ ಪ್ರವೃತ್ತಿ ಆರಂಭಿಸಿದ್ದೇ ರಾಹುಲ್ ಗಾಂಧಿ, ನಾವಲ್ಲ. ಅವರೇ ಶಾಸಕರಿಗೆ ರಾಜೀನಾಮೆ ಸಲ್ಲಿಸಲು ಹೇಳಿರುವುದರಿಂದ ಶಾಸಕರೂ ರಾಜೀನಾಮೆ ಸಲ್ಲಿಸುತ್ತಿದ್ದಾರೆ" ಎಂದು ಗುಡುಗಿದ್ದಾರೆ. 



ಈಗಾಗಲೇ ಸಮ್ಮಿಶ್ರ ಸರ್ಕಾರದ 14 ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿ ಠಿಕಾಣಿ ಹೂಡಿದ್ದು, ಪಕ್ಷೇತರ ಶಾಸಕ ಹೆಚ್.ನಾಗೇಶ್ ಸಹ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಏತನ್ಮಧ್ಯೆ ಸಂಪುಟ ಪುನರ್ರಚಿಸಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಿರಿಯ ನಾಯಕರು ನಿರಂತರ ಸಭೆಗಳ ಮೂಲಕ ಚರ್ಚೆ ನಡೆಸಿದ್ದಾರೆ.