ಇಂದು ಅಮೇಥಿಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ
ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಲು ಕಾರಣವೇನು ಎಂಬುದನ್ನು ತಿಳಿಯಲು ರಾಹುಲ್ ಗಾಂಧಿ ಪ್ರಯತ್ನಿಸಲಿದ್ದಾರೆ ಎಂದು ವರದಿಯಾಗಿದೆ.
ಅಮೇಥಿ: 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಭದ್ರಕೋಟೆ ಅಮೇಥಿಯಲ್ಲಿ ಸೋಲನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಥಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ರಾಹುಲ್ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡುವ ನಿರೀಕ್ಷೆ ಇದ್ದು, ಸ್ಥಳೀಯ ಜನರೊಂದಿಗೂ ಸಂವಹನ ನಡೆಸಲಿದ್ದಾರೆ ಎನ್ನಲಾಗಿದೆ.
2003 ರಿಂದ ಇಲ್ಲಿನ ಪ್ರತಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಜಯಗಳಿಸುವುದರೊಂದಿಗೆ ಅಮೇಥಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ. ಆದಾಗ್ಯೂ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಸ್ಮೃತಿ ಇರಾನಿ ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಜಯ ಸಾಧಿಸಿದ್ದಾರೆ.
ಅಮೇಥಿಯ ಅಗತ್ಯತೆಗಳನ್ನು ರಾಹುಲ್ ನಿರ್ಲಕ್ಷಿಸಿರುವುದಾಗಿ ಬಿಜೆಪಿ ದೀರ್ಘಕಾಲ ಆರೋಪಿಸಿತ್ತು, ಇದಲ್ಲದೆ ಈ ಚುನಾವಣೆಯಲ್ಲಿ ಅಮೇಥಿಯಿಂದ ಸೋತಿದ್ದಕ್ಕಾಗಿ ಕಾಂಗ್ರೆಸ್ ಅಗಾಧವಾದ ಹೊಡೆತವನ್ನು ಎದುರಿಸಬೇಕಾಯಿತು. ಸಂಜಯ್ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಕಾಲದಿಂದಲೂ ಗೆದ್ದಿದ್ದ ಈ ಕ್ಷೇತ್ರವನ್ನು ರಾಹುಲ್ ಗಾಂಧಿ ಕಳೆದುಕೊಂಡರು. ವಾಸ್ತವವಾಗಿ, ಕೇರಳದ ವಯನಾಡ್ ನಿಂದ ರಾಹುಲ್ ಸ್ಪರ್ಧಿಸದಿದ್ದರೆ, ಅವರು ಸಂಸತ್ತಿಗೆ ಹೋಗಲು ಸಹ ಸಾಧ್ಯವಾಗುತ್ತಿರಲಿಲ್ಲ.
ಚುನಾವಣೆ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಅಮೇಥಿಗೆ ತೆರಳುತ್ತಿರುವ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಲು ಕಾರಣವೇನು ಎಂಬುದನ್ನು ತಿಳಿಯಲು ರಾಹುಲ್ ಗಾಂಧಿ ಪ್ರಯತ್ನಿಸಲಿದ್ದಾರೆ ಎಂದು ವರದಿಯಾಗಿದೆ. ಅಮೇಥಿ ಬೇಟಿ ವೇಳೆ ಸಲೋನ್, ಅಮೇಥಿ, ಗೌರಿಗಂಜ್, ಜಗದೀಶ್‌ಪುರ ಮತ್ತು ತಿಲೋಯಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.