ವಯನಾಡ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ ನಿಂದ ಸ್ಪರ್ಧಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ್ ಕಮ್ಯೂನಿಸ್ಟ್ ಪಕ್ಷದ ನಾಯಕ ಡಿ.ರಾಜಾ, ಇದು ರಾಹುಲ್ ಗಾಂಧಿಯ  ದೂರದೃಷ್ಠಿ ಇಲ್ಲದ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಚುನವಣಾ ಪ್ರಚಾರಕ್ಕೆಂದು ಕೇರಳಕ್ಕೆ ಆಗಮಿಸಿದ ರಾಜಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ವಯನಾಡ್'ನಿಂದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ದೇಶಕ್ಕೆ ಯಾವ ಸಂದೇಶ ನೀಡಲು ಹೊರಟಿದೆ? ಒಂದು ರೀತಿಯಲ್ಲಿ ಸಿಪಿಐ ಮತ್ತು ಎಡಪಂಥೀಯರ ವಿರುದ್ಧ ಹೋರಾಡಲು ರಾಹುಲ್ ಗಾಂಧಿಯನ್ನು ಕಣಕ್ಕಿಳಿಸುವ ಮೂಲಕ ಮುಜುಗರ ಉಂಟುಮಾಡಿದೆ" ಎಂದಿದ್ದಾರೆ.


ನಮ್ಮ ಅಭ್ಯರ್ಥಿ ನಾಮಪತ್ರ ಹಿಂಪಡೆಯುವುದಿಲ್ಲ
ರಾಹುಲ್ ಗಾಂಧಿಗೆ ಎದುರಾಳಿಯಾಗಿ ಸಿಪಿಐ ನ ಪಿಪಿ ಸುನೀರ್ ಎಲ್ಡಿಎಫ್ ಅಭ್ಯರ್ಥಿಯಾಗಿದ್ದರೆ ಬಿಡಿಜೀಸ್ ಅಭ್ಯರ್ಥಿಯಾದ ತುಷಾರ್ ವೆಳ್ಳಪಳ್ಳಿ ಎನ್ ಡಿಎ ಅಭ್ಯರ್ಥಿಯಾಗಿ ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಸ್ಪರ್ಧಿಸುತ್ತಿರುವುದರಿಂದ ತಮ್ಮ ಅಭ್ಯರ್ಥಿಯ ನಾಮಪತ್ರ ಹಿಂತೆಗೆದುಕೊಳ್ಳುವ ಆಲೋಚನೆಯಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಾ,  ನಮ್ಮ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಮತ್ತಷ್ಟು ಬಿರುಸಿನ ಪ್ರಚಾರ ಕೈಗೊಳ್ಳಲಿದ್ದೇವೆ" ಎಂದಿದ್ದಾರೆ.


ಕಾಂಗ್ರೆಸ್ ನೀಡಿರುವ ಕಾರಣಗಳು ಮತ್ತು ವಾದ ಅಸಂಬದ್ಧವಾಗಿದೆ
ಎಲ್ಲಾ ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳು BJP ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಲು ಹೋರಾಡಬೇಕು ಎಂದು ಎಡರಂಗ ನಿರಂತರವಾಗಿ ಹೇಳುತ್ತಿದೆ. ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟವನ್ನು ಸೋಲಿಸುವುದು ಮತ್ತು ದೇಶದ ಪ್ರಜಾತಂತ್ರ, ಸಂವಿಧಾನ ಮತ್ತು ಜಾತ್ಯಾತೀತತೆಯನ್ನು ರಕ್ಷಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಅಷ್ಟಕ್ಕೂ ವಯನಾಡಿನಿಂದ ರಾಹುಲ್ ಕಣಕ್ಕಿಳಿಯುತ್ತಿರುವ ನಿರ್ಧಾರ ನಿಜಕ್ಕೂ ಅವಿವೇಕದ ನಿರ್ಧಾರ ಎಂದು ಡಿ.ರಾಜಾ ಹೇಳಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭೆ ಚುನಾವಣೆಗೆ ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸುವುದರೊಂದಿಗೆ ಇಂದು ಬೆಳಿಗ್ಗೆ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದಲೂ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು. ವಯನಾಡ್ ಕ್ಷೇತ್ರದಿಂದ ರಾಹುಲ್ ಸ್ಪರ್ಧೆಗೆ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಅಮೇಥಿಯಲ್ಲಿ ಸೋಲಿನ ಭಯದಿಂದಾಗಿ ರಾಹುಲ್ ವಯನಾಡ್ ನಲ್ಲಿಯೂ ಸ್ಪರ್ಧಿಸುತ್ತಿದ್ದಾರೆ ಎಂದು ವಿರೋಧಪಕ್ಷಗಳು ಟೀಕಿಸಿವೆ.