ನಾನು ತಪ್ಪು ಮಾಡಿದ್ದರೆ ನನ್ನ ಮನೆ ಮೇಲೂ ಐಟಿ ದಾಳಿ ನಡೆಸಿ: ಪ್ರಧಾನಿ ಮೋದಿ
ದೆಹಲಿಯಿಂದ ಭೋಪಾಲ್ ವರೆಗೆ ಭ್ರಷ್ಟಾಚಾರವೇ ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಆದರೆ ನಿಮ್ಮ ಚೌಕಿದಾರ ಜಾಗರೂಕನಾಗಿದ್ದಾನೆ ಎಂದು ಮೋದಿ ಹೇಳಿದ್ದಾರೆ.
ಸಿಧಿ, ಮಧ್ಯಪ್ರದೇಶ: ನಾನೇನಾದರೂ ತಪ್ಪು ಮಾಡಿದ್ದರೆ ನನ್ನ ಮನೆ ಮೇಲೂ ಐಟಿ ದಾಳಿ ನಡೆಸಿ, ಕಾನೂನು ಎಲ್ಲರಿಗೂ ಒಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ವಿಪಕ್ಷಗಳ ನಾಯಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ತೀವ್ರ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ನಡೆಸಿದ ವಾಗ್ದಾಳಿಗೆ ಮಧ್ಯಪ್ರದೇಶದ ಸಿಧಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಒಂದು ವೇಳೆ ಮೋದಿ ತಪ್ಪು ಮಾಡಿದರೆ, ಮೋದಿ ನಿವಾಸದ ಮೇಲೂ ಸಹ ದಾಳಿ ನಡೆಸಲಾಗುತ್ತದೆ" ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, "ದೆಹಲಿಯಿಂದ ಭೋಪಾಲ್ ವರೆಗೆ ಭ್ರಷ್ಟಾಚಾರವೇ ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಆದರೆ ನಿಮ್ಮ ಚೌಕಿದಾರ ಜಾಗರೂಕನಾಗಿದ್ದಾನೆ. ಕಾಂಗ್ರೆಸ್ ಎಂದಿಗೂ ಜನರ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಯನ್ನು ಬಯಸುವುದಿಲ್ಲ. ಬಡತನ ನಿರ್ಮೂಲನೆ ಮಾಡಲು ಬಯಸುವುದಿಲ್ಲ, ರೈತರ ಸಮಸ್ಯೆ ಬಗೆಹರಿಸುವುದಿಲ್ಲ" ಎಂದು ಹೇಳಿದ್ದಾರೆ.