ಮುಂಬೈ: ಇತ್ತೀಚೆಗೆ ನಡೆದ ಪಟ್ಹಾನ್ಕೊಟ್ ಹಾಗೂ ಪುಲ್ವಾಮಾ ದಾಳಿಯ ರೀತಿಯಲ್ಲಿಯೇ ಲೋಕಸಭೆ ಚುನಾವಣೆಗೂ ಮುನ್ನ ಉಗ್ರರ ದಾಳಿ  ನಡೆಯಬಹುದು ಎಂದು ಮಹಾರಾಷ್ಟ್ರ ನವ್ ನಿರ್ಮಾಣ್ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಮಹಾರಾಷ್ಟ್ರ ನವ್ ನಿರ್ಮಾಣ್ ಸೇನೆಯ 13ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ ಠಾಕ್ರೆ, ರಾಮ ಮಂದಿರ ವಿಚಾರವೂ ಸೇರಿದಂತೆ ಎಲ್ಲ ನೀತಿಗಳಲ್ಲೂ ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ "ಹೀನಾಯವಾಗಿ ವಿಫಲವಾಗಿರುವುದು" ನಿಜ ಎಂದು ರಾಜ್ ಠಾಕ್ರೆ ಅಭಿಪ್ರಾಯ ಪಟ್ಟಿದ್ದಾರೆ.


ಇದೇ ಸಂದರ್ಭದಲ್ಲಿ, ಪುಲ್ವಾಮಾ ದಾಳಿಗೂ ಮುನ್ನ ಸಂಸ್ಥೆಗಳು ನೀಡಿದ ಎಚ್ಚರಿಕೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದ ಠಾಕ್ರೆ, "ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ. ಈಗಲೂ ನಾವೇಕೆ ಪ್ರಶ್ನೆಗಳನ್ನು ಕೇಳಬಾರದು? ಡಿಸೆಂಬರ್ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಾಲ್ ಅವರು ಬ್ಯಾಂಕಾಕ್ ನಲ್ಲಿ ಪಾಕಿಸ್ತಾನಿ ಎನ್ಎಸ್ಎ ಅನ್ನು ಭೇಟಿಯಾಗಿದ್ದರು. ಆದರೆ ಆ ಭೇಟಿಯಲ್ಲಿ ಏನು ನಡೆಯಿತು ಎಂಬುದನ್ನು ನಮಗೆ ಯಾರು ತಿಳಿಸುತ್ತಾರೆ ಎಂದು ಪ್ರಶ್ನಿಸಿದರು.


ಫೆಬ್ರವರಿ ಹದಿನಾಲ್ಕರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಳಿಕ ಭಾರತೀಯ ವಾಯು ಸೇನೆ ಪಾಕಿಸ್ತಾನದ ಬಾಲಕೋಟ್ ನಲ್ಲಿ ಉಗ್ರ ನೆಲೆ ಮೇಲೆ ದಾಳಿ ನಡೆಸಿತ್ತು. ಈ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.