ನವದೆಹಲಿ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ನಿನ್ನೆ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ರಾಜ್ಯಸಭಾ ಸದಸ್ಯರೂ ಆಗಿದ್ದ ಸೈನಿ ಅವರಿಗೆ 75 ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಸಾವನ್ನಪ್ಪಿದ ಮದನ್ ಲಾಲ್ ಸೈನಿ ಅವರನ್ನು ಶ್ವಾಸಕೋಶದ ಸೋಂಕಿನಿಂದ ಶನಿವಾರ ಜೈಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯ ಪರಿಸ್ಥಿತಿ ಕ್ಷಿಣಿಸಿದ್ದರಿಂದ ದೆಹಲಿಗೆ ಸ್ಥಳಾಂತರಿಸಲಾಗಿತ್ತು. ಮದನ್ ಲಾಲ್ ಸೈನಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಸಂಜೆ ಏಳು ಗಂಟೆ ಒಂಬತ್ತು ನಿಮಿಷಗಳಲ್ಲಿ ನಿಧನರಾದರು ಎಂದು ಏಮ್ಸ್ ಮೂಲಗಳು ತಿಳಿಸಿವೆ.


ಸೈನಿ ಜುಲೈ 13, 1943 ರಂದು ಜನಿಸಿದರು. ಭಾರತೀಯ ಕಾರ್ಮಿಕ ಸಂಘ ಮತ್ತು ಬಿಜೆಪಿ ಕಿಸಾನ್ ಮೋರ್ಚಾ ಸೇರಿದಂತೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಏಪ್ರಿಲ್ 4, 2018 ರಂದು ರಾಜ್ಯಸಭಾ ಸಂಸದರಾಗಿ ಆಯ್ಕೆಯಾದರು. ಕಳೆದ ವರ್ಷ ಜೂನ್‌ನಲ್ಲಿ ಅವರನ್ನು ರಾಜಸ್ಥಾನ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮೃತರು ಪತ್ನಿ, ಒಬ್ಬ ಮಗ ಮತ್ತು ಆರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.


ಸೈನಿ ಅವರ ನಿಧನ ಬಿಜೆಪಿಗೆ ದೊಡ್ಡ ನಷ್ಟ:
ಸೈನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, "ಮದನ್ ಲಾಲ್ ಸೈನಿ ಅವರ ನಿಧನವು ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ರಾಜಸ್ಥಾನದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಅಪಾರ. ಉತ್ತಮ ನಡವಳಿಕೆ ಮತ್ತು ಸಮುದಾಯ ಸೇವೆಯಿಂದಾಗಿ ಅವರು ವ್ಯಾಪಕ ಗೌರವವನ್ನು ಪಡೆದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ. ಓ ಶಾಂತಿ" ಎಂದು ಅವರು ಟ್ವೀಟ್ ಮಾಡಿದ್ದಾರೆ. 



ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮಾತನಾಡಿ, "ರಾಜ್ಯಸಭಾ ಸದಸ್ಯ ಮದನ್ ಲಾಲ್ ಸೈನಿ ಹಠಾತ್ ನಿಧನದಿಂದ ತೀವ್ರ ನೋವುಂಟಾಗಿದೆ. ರಾಜಸ್ಥಾನದಲ್ಲಿ ಸಂಸದ, ಶಾಸಕ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ತಮ್ಮ ವಿಶಾಲ ಸಾರ್ವಜನಿಕ ಜೀವನದಲ್ಲಿ ಘನತೆಯಿಂದ ಕೆಲಸ ಮಾಡಿದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.


"ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೈನಿಯವರ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಬಿಜೆಪಿ ನಾಯಕನ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೇನೆ. ಸೈನಿ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೊರೆಯಲಿ" ಎಂದು ಅವರು ಹೇಳಿದ್ದಾರೆ.