ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಶ್ರೀಹರನ್‌ಗೆ ಒಂದು ತಿಂಗಳ ಪೆರೋಲ್ ಮಂಜೂರು
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ 1991 ರಲ್ಲಿ ನಳಿನಿಯನ್ನು ಬಂಧಿಸಲಾಗಿತ್ತು.
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಆರೋಪಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್‌ಗೆ ಒಂದು ತಿಂಗಳ ಅವಧಿಯ ಪೆರೋಲ್ ನೀಡಿ ಗುರುವಾರ ಬಿಡುಗಡೆ ಮಾಡಲಾಗಿದೆ.
ಮಗಳ ಮದುವೆ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳಲು ಹಾಗೂ ವಿವಾಹಕ್ಕೆ ಹಾಜರಾಗಲು ಮದ್ರಾಸ್ ಹೈಕೋರ್ಟ್ ಜುಲೈ 5 ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡಿತ್ತು. ಅದರಂತೆ ಗುರುವಾರ ನಳಿನಿ ಅವರನ್ನು ವೆಲ್ಲೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಎಂ.ನಿರ್ಮಲ್ ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶವನ್ನು ಅಂಗೀಕರಿಸಿದ್ದು, ಅವರು ರಾಜಕೀಯ ಮುಖಂಡರನ್ನು ಭೇಟಿ ಮಾಡಬಾರದು, ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬಾರದು ಎಂಬ ಷರತ್ತಿನ ಮೇಲೆ ಪೆರೋಲ್ ನೀಡಿ ಆದೇಶ ಹೊರಡಿಸಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ 1991 ರಲ್ಲಿ ನಳಿನಿಯನ್ನು ಬಂಧಿಸಲಾಗಿತ್ತು. ಅಲ್ಲಿಂದೀಚೆಗೆ ಭಾರತದಲ್ಲಿ ಅತಿ ಹೆಚ್ಚು ಕಾಲ ಜೈಲು ವಾಸ ಅನುಭವಿಸುತ್ತಿರುವ ಮಹಿಳಾ ಖೈದಿಯಾಗಿದ್ದ ನಳಿನಿ ಅವರಿಗೆ 28 ವರ್ಷಗಳ ಸುದೀರ್ಘ ಜೈಲುವಾಸದಲ್ಲಿ ಇದೇ ಮೊದಲ ಬಾರಿಗೆ 30 ದಿನಗಳ ಸಾಮಾನ್ಯ ಪೆರೋಲ್ ನೀಡಲಾಗಿದೆ.
ಚೆನ್ನೈನ ರಾಯಪೆಟ್ಟದಲ್ಲಿರುವ ತನ್ನ ಮನೆಗೆ ಭೇಟಿ ನೀಡಲು ಆಕೆಗೆ ಅನುಮತಿ ದೊರೆಯದ ಕಾರಣ, ಚೆನ್ನೈನಿಂದ 140 ಕಿಲೋಮೀಟರ್ ದೂರದಲ್ಲಿರುವ ವೆಲ್ಲೂರು ಪಟ್ಟಣದಲ್ಲಿ ನಳಿನಿ ಉಳಿಯಲಿದ್ದು, ಅವರ ಕುಟುಂಬವು ವಿವಾಹ ಸಿದ್ಧತೆಗಳಿಗಾಗಿ ಸಾತುವಾಚರಿಯಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದೆ. ತಮ್ಮ ಮಗಳು ಹರಿತ್ರಾ ಶ್ರೀಹರನ್, ತಾಯಿ ಪದ್ಮಾವತಿ, ಸಹೋದರಿ ಕಲ್ಯಾಣಿ ಮತ್ತು ಸಹೋದರ ಭಾಗ್ಯನಾಥನ್ ಅವರೊಂದಿಗೆ ನಳಿನಿ ಈ ಮನೆಯಲ್ಲಿ ಒಂದು ತಿಂಗಳು ವಾಸಿಸಲಿದ್ದಾರೆ.