ನವದೆಹಲಿ: ಮಾಜಿ ಪಂಜಾಬ್ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಸೋಮವಾರದಂದು 1984 ರ ಸಿಖ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ಹಠಾತ್ ದಾಳಿ ನಡೆಸಿದ್ದು, ಅಂದಿನ ಹತ್ಯಾಕಾಂಡದ ಉಸ್ತುವಾರಿಯನ್ನು ಮಾಜಿ ಪ್ರಧಾನಿ ರಾಜೀವ್​ ಗಾಂಧಿ ವಹಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

1984 ರಲ್ಲಿ ರಾಜೀವ್ ಗಾಂಧಿ ಅವರೊಂದಿಗೆ ತಾವು ನಗರದಾದ್ಯಂತ ಪ್ರವಾಸ ನಡೆಸಿರುವುದಾಗಿ ಜಗದೀಶ್ ಟೈಟ್ಲರ್ ಬಹಿರಂಗಪಡಿಸಿದ್ದಾರೆ. ಅದರರ್ಥ ಅಂದಿನ ಪ್ರಧಾನಿ ರಾಜೀವ್​ ಗಾಂಧಿ ಅವರು ಹತ್ಯಾಕಾಂಡದ ಉಸ್ತುವಾರಿ ವಹಿಸಿದ್ದರು ಎಂಬುದಾಗಿದೆ ಎಂದು ಸುಖ್ ​​ಬಿರ್​ ಸೋಮವಾರ ಪ್ರತಿಪಾದಿಸಿದ್ದಾರೆ.


ಅಲ್ಲದೆ, ಟೈಟ್ಲರ್ ಬಹಿರಂಗಪಡಿಸಿರುವ ಈ ವಿಚಾರವು ಬಹಳ ಗಂಭೀರವಾಗಿದ್ದು, ಈ ಕುರಿತು  ಕೇಂದ್ರ ತನಿಖಾ ದಳ(ಸಿಬಿಐ) ತನಿಖೆ ನಡೆಸಬೇಕೆಂದು ಸುಖ್ ಬೀರ್ ಆಗ್ರಹಿಸಿದ್ದಾರೆ. 


ಅಂದಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಅವರ ಅಂಗರಕ್ಷಕರೇ ಅಕ್ಟೋಬರ್ 31, 1984ರಂದು ಹತ್ಯೆ ಮಾಡಿದ ನಂತರ ನಡೆದ ಸಿಖ್​ ವಿರೋಧಿ ದಂಗೆಯ 186 ಪ್ರಕರಣಗಳ ಮರು ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಕೆಲ ದಿನಗಳ ಹಿಂದೆಯಷ್ಟೇ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಿದೆ.


ದೆಹಲಿ, ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ನಡೆದ ದಂಗೆಯಿಂದಾಗಿ ಒಟ್ಟು 3,325 ಜನರು ಮೃತಪಟ್ಟಿದ್ದರು. ದೆಹಲಿವೊಂದರಲ್ಲೇ 2,733 ಜನರು ಪ್ರಾಣ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.