ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಸಿಯಾಚಿನ್ ನ ಗ್ಲೇಸಿಯರ್ ಮತ್ತು ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕಾರ್ಯಾಚರಣೆ ಬಗ್ಗೆ ಮಾಹಿತಿ ಸಂಗ್ರಹಿಸಲಿರುವ ಸಿಂಗ್ ಪಾಕಿಸ್ತಾನದ ಗಡಿ ಭಾಗದಲ್ಲಿನ ಭದ್ರತಾ ಮುನ್ನೆಚ್ಚರಿಕಾ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.


COMMERCIAL BREAK
SCROLL TO CONTINUE READING

ರಕ್ಷಣಾ ಸಚಿವಾಲಯದ ಉಸ್ತುವಾರಿಯನ್ನು ವಹಿಸಿಕೊಂಡ ನಂತರ, ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧಭೂಮಿ ಎಂದು ಕರೆಯಲಾಗುವ ಸಿಯಾಚಿನ್ ಗ್ಲೇಸಿಯರ್ಗೆ ರಾಜನಾಥ್ ಸಿಂಗ್ ತಮ್ಮ ಮೊದಲ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಭೇಟಿ ವೇಳೆ ಕ್ಷೇತ್ರ ಕಮಾಂಡರ್ ಗಳು ಮತ್ತು ಯೋಧರೊಂದಿಗೆ ಸಂವಹನ ನಡೆಸಲಿದ್ದು, ಸೇನಾ ಮುಖ್ಯಸ್ಥ ಜನರಲ್ ವಿಪಿನ್ ರಾವತ್ ಸಹ ರಕ್ಷಣಾ ಸಚಿವರಿಗೆ ಸಾಥ್ ನೀಡಲಿದ್ದಾರೆ.


ಸಿಯಾಚಿನ್ ಭೇಟಿ ಬಳಿಕ ಅಲ್ಲಿಂದ ಶ್ರೀನಗರಕ್ಕೆ ರಾಜನಾಥ್ ಸಿಂಗ್ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, ಉತ್ತರ ಸೇನಾ ಕಮಾಂಡರ್ ಮತ್ತು ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ, ಕಮಾಂಡರ್, 14 ಕಾರ್ಪ್ಸ್ ಲೆಹ್ ಅವರು ಪಾಕಿಸ್ತಾನದ ಗಡಿಯಲ್ಲಿರುವ ಭದ್ರತಾ ಪರಿಸ್ಥಿತಿ ಮತ್ತು ಭಯೋತ್ಪಾದನಾ ಕಾರ್ಯಾಚರಣೆಗಳ ಬಗ್ಗೆ ಸಿಂಗ್ ಅವರಿಗೆ ಮಾಹಿತಿಯನ್ನು ನೀಡಲಿದ್ದಾರೆ.


ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಿಗ್ಗೆ ಲಡಾಖ್ ನ ಥೋಯಿಸ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಅಲ್ಲಿಂದ ಮೊದಲಿಗೆ ಕುಮಾರ್ ಪೋಸ್ಟ್ ಗೆ ತೆರಳಲಿದ್ದಾರೆ. ಇದರ ನಂತರ, ರಕ್ಷಣಾ ಸಚಿವರು ಸಿಯಾಚಿನ್ ಗ್ಲೇಶಿಯರ್ಗೆ ಭೇಟಿ ನೀಡುತ್ತಾರೆ. ಅಲ್ಲಿ ಅವರು ಸೇನಾ ಕ್ಷೇತ್ರದ ಕಮಾಂಡರ್ಗಳು ಮತ್ತು ಸೈನಿಕರೊಂದಿಗೆ ಸಂವಹನ ನಡೆಸುತ್ತಾರೆ. ಲಿಯೋ ಸಿಯಿನ್ ಯುದ್ಧ ಸ್ಮಾರಕಕ್ಕೂ ಸಿಂಗ್ ಭೇಟಿ ನೀಡಲಿದ್ದಾರೆ.


ಕೊರಾಕೋರಮ್ ಶ್ರೇಣಿಯಲ್ಲಿರುವ ಸಿಯಾಚಿನ್ ಹಿಮನದಿ ವಿಶ್ವದ ಅತಿ ಎತ್ತರದ ಸೇನಾ ವಲಯವಾಗಿದೆ, ಅಲ್ಲಿ ಸೈನಿಕರು ತೀವ್ರ ಶೀತ ಮತ್ತು ಬಲವಾದ ಗಾಳಿಯನ್ನು ಎದುರಿಸಬೇಕಾಗುತ್ತದೆ. ಚಳಿಗಾಲದಲ್ಲಿ ಭೂಕುಸಿತಗಳು ಮತ್ತು ಹಿಮಕುಸಿತಗಳು ಸಾಮಾನ್ಯವಾಗಿರುತ್ತವೆ. ತಾಪಮಾನವು ಮೈನಸ್ 60 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. 14 ಕಾರ್ಪ್ಸ್ ಮತ್ತು 15 ಕಾರ್ಪ್ಸ್ನಲ್ಲಿ ಪಾಕಿಸ್ತಾನ ರಚಿಸಿದ ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ರಕ್ಷಣಾ ಸಚಿವರಿಗೆ ಭಾರತದ ಸಿದ್ಧತೆಗಳ ಕುರಿತು ವಿವರವಾದ ಪ್ರಸ್ತುತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಂಜೆ ರಕ್ಷಣಾ ಸಚಿವರು ಹೊಸದಿಲ್ಲಿಗೆ ಮರಳುವ ನಿರೀಕ್ಷೆ ಇದೆ.