ಕಾಂಗ್ರೆಸ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ರಾಜೀನಾಮೆ
ಸಂಸದ ಸಂಜಯ್ ಸಿಂಗ್ ರಾಜೀನಾಮೆ ಸ್ವೀಕರಿಸಿದ ರಾಜ್ಯಸಭಾ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು.
ನವದೆಹಲಿ: ಕಾಂಗ್ರೆಸ್ ಮುಖಂಡ ಸಂಜಯ್ ಸಿಂಗ್ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭಾ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಸಂಸದ ಸಂಜಯ್ ಸಿಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಸಂಜಯ್ ಸಿಂಗ್ ಅವರ ಪತ್ನಿ ಅಮಿತಾ ಕೂಡಾ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಂಜಯ್ ಸಿಂಗ್ ಮತ್ತು ಅಮಿತಾ ಇಬ್ಬರೂ ನಾಳೆ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ನನ್ನ ಮತ್ತು ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧವಿದೆ ಮತ್ತು ಆ ಸಂಬಂಧಗಳಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಸಂಜಯ್ ಸಿಂಗ್ ಹೇಳಿದರು. ನಾವು 40 ವರ್ಷಗಳ ಕಾಲ ಕಾಂಗ್ರೆಸ್ ಜೊತೆ ಸಂಬಂಧ ಹೊಂದಿದ್ದೇವೆ. ಆದರೆ 15-20 ವರ್ಷಗಳಲ್ಲಿ ಪಕ್ಷದಲ್ಲಿ ತಲೆದೂರಿರುವ ಪರಿಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಂಜಯ್ ಸಿಂಗ್, ನಾನು ಎರಡು ಬಾರಿ ಲೋಕಸಭೆಗೆ ಮತ್ತು ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದೇನೆ. ನನ್ನ ನಿರ್ಧಾರ ಒಂದೆರಡು ದಿನಗಳದ್ದಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಪಕ್ಷದಲ್ಲಿ ದಕ್ಷ ನಾಯಕತ್ವವೂ ಇಲ್ಲ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ, ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ ಎಂದು ಹೇಳಿದ್ದಾರೆ. ದೇಶವು ಅವರೊಂದಿಗೆ ಇದೆ ಎಂದು ನಾನು ಭಾವಿಸುತ್ತೇನೆ. ದೇಶವು ಅವರೊಂದಿಗೆ ಇದ್ದರೆ, ನಾನು ಅವರೊಂದಿಗಿದ್ದೇನೆ. ನಾಳೆ ನಾನು ಬಿಜೆಪಿಗೆ ಸೇರುತ್ತೇನೆ ಎಂದು ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿದರು.