ನವದೆಹಲಿ: ಲೋಕಸಭೆಯಲ್ಲಿ ಅನುಮೋದನೆಗೊಂಡ ಪೌರತ್ವ ತಿದ್ದುಪಡಿ ಮಸೂದೆ-2019 ಅನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ನಂತರ ಈ ಮಸೂದೆಯ ಕುರಿತು ಮೇಲ್ಮನೆಯಲ್ಲಿ ಚರ್ಚೆ ನಡೆದಿದ್ದು, ಚರ್ಚೆಯ ವೇಳೆ ಪ್ರತಿಪಕ್ಷ ಮುಖಂಡರು ಮಸೂದೆಯ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಮಸೂದೆಯನ್ನು ಮತಕ್ಕೆ ಹಾಕುವ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ವೇಳೆ ಪ್ರತಿಪಕ್ಷಗಳು ಮಸೂದೆಯಲ್ಲಿ ತಿದ್ದುಪಡಿಗಾಗಿ ಒಟ್ಟು 14 ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಮಸೂದೆಯನ್ನು ಆಯ್ಕೆ ಸಮೀತಿಗೆ ಹಸ್ತಾಂತರಿಸುವ ಕುರಿತು ವೋಟಿಂಗ್ ನಡೆದಿದ್ದು, ವೋಟಿಂಗ್ ಪರವಾಗಿ 99  ಹಾಗೂ ವಿರುದ್ಧ ಒಟ್ಟು 124 ಮತಗಳು ಚಲಾವಣೆಗೊಂಡಿವೆ.


COMMERCIAL BREAK
SCROLL TO CONTINUE READING

ಬಳಿಕ ರಾಜ್ಯಸಭಾ ಸ್ಪೀಕರ್ ಈ ಮಸೂದೆ ಅನುಮೋದನೆಗೆ ವೋಟಿಂಗ್ ಪ್ರಕ್ರಿಯೆ ನಡೆಸಿದ್ದಾರೆ. ಈ ವೇಳೆ ಮಸೂದೆ ಪರವಾಗಿ 125 ಮತಗಳು ಚಲಾವಣೆಗೊಂಡಿದ್ದರೆ, ಮಸೂದೆಯ ವಿರುದ್ಧ ಒಟ್ಟು 105 ಮತಗಳು ಚಲಾವಣೆಗೊಂಡಿವೆ. ಹೀಗಾಗಿ ಪೌರತ್ವ ತಿದ್ದುಪಡಿ ಮಸೂದೆಗೆ ಪಾರ್ಲಿಮೆಂಟ್ ನ ಎರಡೂ ಸದನಗಳಲ್ಲಿ ಅನುಮೋದನೆ ದೊರೆತಂತಾಗಿದೆ.


ಮಸೂದೆಯ ಕುರಿತು ಚರ್ಚೆ ನಡೆದ ವೇಳೆ ಪ್ರತಿಪಕ್ಷ ಸದಸ್ಯರು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಗೃಹ ಸಚಿವರು ಉತ್ತರ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅಮಿತ್ ಶಾ, ಒಂದು ವೇಳೆ ದೇಶ ವಿಭಜನೆ ನಡೆಯದೆ ಇದ್ದಿದ್ದರೆ, ಈ ಮಸೂದೆಯನ್ನು ತರುವ ಅಗತ್ಯವೇ ಬೀಳುತ್ತಿರಲಿಲ್ಲ . ದೇಶ ವಿಭಜನೆಯ ಬಳಿಕ ನಿರ್ಮಾಣಗೊಂಡ ಪರಿಸ್ಥಿತಿಯನ್ನು ನಿವಾರಿಸಲು ಈ ಮಸೂದೆ ತರಬೇಕಾಗುವ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ. ಈ ಹಿಂದಿನ ಸರ್ಕಾರಗಳು ಪರಿಹಾರ ಕಂಡುಕೊಂಡಿದ್ದರೂ ಕೂಡ ಈ ತಿದ್ದುಪಡಿ ಮಸೂದೆ ಅನಿವಾರ್ಯವಾಗಿತ್ತು ಎಂದು ಶಾ ಒತ್ತಿ ಹೇಳಿದ್ದಾರೆ.

ನೆಹರೂ-ಲಿಯಾಕತ್ ಒಪ್ಪಂದದ ಅಡಿ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಬಹುಸಂಖ್ಯಾತರ ಸಮಾನತೆ ಕಲ್ಪಿಸಲಾಗುವುದು ಎಂಬುದನ್ನು ಉಭಯ ಪಕ್ಷಗಳು ಒಪ್ಪಿಕೊಂಡಿದ್ದವು, ಅವರ ವ್ಯವಸಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪೂಜೆ-ಅರ್ಚನೆ ನಡೆಸುವ ಸ್ವಾತಂತ್ರ್ಯವನ್ನು ಸುನಿಶ್ಚಿತಗೊಳಿಸಲಾಗುವುದು ಎನ್ನಲಾಗಿತ್ತು. ಆದರೆ, ಅಲ್ಲಿ ಜನರನ್ನು ಚುನಾವಣೆಗೆ ಸ್ಪರ್ಧಿಸುವುದರಿಂದಲೂ ತಡೆಯಲಾಯಿತು. ಜೊತೆಗೆ ಅಲ್ಲಿ ಕ್ರಮೇಣ ಅಲ್ಪಸಂಖ್ಯಾತರ ಸಂಖ್ಯೆಯಲ್ಲೂ ಕೂಡ ಇಳಿಕೆ ಕಾಣಲಾರಂಭಿಸಿತು ಎಂದಿದ್ದಾರೆ. ನಮ್ಮ ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಮುಖ್ಯನ್ಯಾಯಮೂರ್ತಿಗಳಂತಹ ಹುದ್ದೆಗಳನ್ನೂ ಕೂಡ ಅಲ್ಪಸಂಖ್ಯಾತರು ಅಲಂಕರಿಸಿದ್ದಾರೆ ಹಾಗೂ ನಮ್ಮ ದೇಶದಲ್ಲಿ ಅಲ್ಪ ಸಂಖ್ಯಾತರಿಗೆ ಸೂಕ್ತ ಭದ್ರತೆ ಕೂಡ ಕಲ್ಪಿಸಲಾಗಿದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ