`ರಾಮ ಸೇತು ಇಂದಿಗೂ ಅಸ್ತಿತ್ವದಲ್ಲಿದೆ` : ಅಮೆರಿಕದ ಸೈನ್ಸ್ ಚಾನೆಲ್ ವರದಿ!
`ರಾಮಸೇತು` ನೈಸರ್ಗಿಕವಲ್ಲ, ನಿಜಕ್ಕೂ ಮಾನವ ನಿರ್ಮಿತವಾಗಿದ್ದು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ಅಮೆರಿಕದ `ಸೈನ್ಸ್ ಚಾನೆಲ್` ವರದಿ ಮಾಡಿದೆ.
ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವೆ ನಿರ್ಮಾಣಗೊಂಡಿದ್ದ ಪೌರಾಣಿಕ 'ರಾಮಸೇತು' ನೈಸರ್ಗಿಕವಲ್ಲ, ನಿಜಕ್ಕೂ ಮಾನವ ನಿರ್ಮಿತವಾಗಿದ್ದು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ಅಮೆರಿಕದ 'ಸೈನ್ಸ್ ಚಾನೆಲ್' ವರದಿ ಮಾಡಿದೆ.
"ಪುರಾತನ ಹಿಂದೂ ನಂಬಿಕೆಯಂತೆ ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಸೇತುವೆ ಇರುವುದು ನಿಜವೇ? ಎಂಬ ಪ್ರಶ್ನೆಗೆ ಸೇತುವೆ ಇರುವುದು ನಿಜ ಎಂದು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ'' ಎಂದು ಚಾನಲ್ ಟ್ವೀಟ್ ಮಾಡಿದೆ.
ಜಗತ್ತಿನ ವಿಶಿಷ್ಟ ಸಂಗತಿಗಳ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಿಸಿ ಪ್ರಸಾರ ಮಾಡುವಲ್ಲಿ ಹೆಸರುವಾಸಿಯಾಗಿರುವ ಅಮೇರಿಕಾದಲ್ಲಿ ಡಿಸ್ಕವರಿ ಕಮ್ಯುನಿಕೇಷನ್ಸ್ ಸ್ವಾಮ್ಯದ ಸೈನ್ಸ್ ಚಾನೆಲ್ನಲ್ಲಿ ಬುಧವಾರ ರಾಮಸೇತುವಿನ ಸಂಗತಿ ಪ್ರಸಾರವಾಗಲಿದೆ. ರಾಮೇಶ್ವರದಿಂದ ಲಂಕಾದ ಮನ್ನಾರ್‌ವರೆಗಿನ 50 ಕಿ.ಮೀ. ದೂರದ ಸೇತುವೆ ಬಗ್ಗೆ ಮಹತ್ವದ ಸಂಶೋಧನೆ, ಇತರ ಮಾಹಿತಿಗಳು ಈ ಕಾರ್ಯಕ್ರಮದಲ್ಲಿವೆ.
''ಇಲ್ಲಿನ ಮರಳಿನ ಪಟ್ಟಿಯ ಕೆಳಗಿರುವ ಕಲ್ಲುಗಳು 7 ಸಾವಿರ ವರ್ಷಗಳ ಹಿಂದಿನದು ಮತ್ತು ಇತರ ಪ್ರದೇಶದಲ್ಲಿನ ಮರಳಿನ ಪಟ್ಟಿ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು'' ಎಂದು ಆ ಚಾನೆಲ್ನ ಪ್ರೋಮೊದಲ್ಲಿ ಹೇಳಲಾಗಿದೆ.
ಈ ಕಾರ್ಯಕ್ರಮದ ಪ್ರೋಮೊ ಭಾರತೀಯ ಜನತಾ ಪಕ್ಷದ(ಬಿಜೆಪಿ)ದಲ್ಲಿ ಸಂಚಲನ ಉಂಟುಮಾಡಿದ್ದು, ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸಚಿವ ಸ್ಮೃತಿ ಇರಾನಿ, ಪಕ್ಷದ ನಾಯಕ ತರುಣ್ ವಿಜಯ್, ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ವಿಡಿಯೋಗೆ ರಿಟ್ವೀಟ್ ಮಾಡಿದ್ದಾರೆ.