ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಕೇಂದ್ರ ಸರ್ಕಾರ  ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಸರ್ಕಾರ ಕಾರ್ಯನಿರ್ವಹಿಸುತ್ತಿರುವ ರೀತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ನಮ್ಮ ಭರವಸೆಗಳು ಹೆಚ್ಚಿಸಿವೆ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ" ಎಂದು ಹೇಳಿದರು.


"ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಲು ಶಿವಸೇನೆ ಕಾರ್ಯಕರ್ತರಿಗೆ ನಾವು ಸೂಚನೆ ನೀಡಿದ್ದೇವೆ. ಇದು ನಮ್ಮ ಸಂಸ್ಥಾಪಕ ಬಾಲಾಸಾಹೇಬ್ ಠಾಕ್ರೆ ಅವರ ದಿನಗಳಿಂದಲೂ ಅಸ್ತಿತ್ವದಲ್ಲಿದೆ" ಎಂದು ಅವರು ಹೇಳಿದರು.


ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ನಿಡುವ 370ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರದಂತೆಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ದಿಟ್ಟ ಹೆಜ್ಜೆ ಇಡಬೇಕೆಂದು ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. 


ಇದೇ ವೇಳೆ, ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಠಾಕ್ರೆ, ಎಲ್ಲವೂ ಸೌಹಾರ್ದಯುತವಾಗಿ ನಡೆಯಲಿದೆ ಎಂದರು.