ಉಪಚುನಾವಣೆಗೆ ತಡೆ: ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಚುನಾವಣೆ ಮುಂದೆ ಹೋಗಬೇಕು ಎಂದು ನಮ್ಮ ಸ್ನೇಹಿತರೆಲ್ಲರೂ ಬಯಸಿದ್ದರು. ಅದರಂತೆಯೇ ಆಗಿದೆ. ಆದರೆ ನನಗೆ ಚುನಾವಣೆ ನಡೆದಿದ್ದರೆ ಒಳ್ಳೆಯದಿತ್ತೇನೋ ಅನಿಸುತ್ತಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿದ್ದ ಉಪಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು, ನಿಗದಿಯಾದಂತೆ ಚುನಾವಣೆ ನಡೆದಿದ್ದರೇ ಒಳ್ಳೆಯದಿತ್ತು ಎಂದು ಹೇಳಿದ್ದಾರೆ.
ಗೋಕಾಕ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಂದೆ ಹೋಗಬೇಕು ಎಂದು ನಮ್ಮ ಸ್ನೇಹಿತರೆಲ್ಲರೂ ಬಯಸಿದ್ದರು. ಅದರಂತೆಯೇ ಆಗಿದೆ. ಆದರೆ ನನಗೆ ಚುನಾವಣೆ ನಡೆದಿದ್ದರೆ ಒಳ್ಳೆಯದಿತ್ತೇನೋ ಅನಿಸುತ್ತಿದೆ. ಈಗಾಗಲೇ ಅನರ್ಹರು ಎನ್ನುವ ಪಟ್ಟದಿಂದ ಸಾಕಷ್ಟು ಮನನೊಂದಿದ್ದೇನೆ ಎಂದು ಹೇಳಿದರು.
ರಾಜೀನಾಮೆ ನೀಡುವುದು ನಮ್ಮ ಹಕ್ಕು. ಆದರೆ ನಾನು ರಾಜೀನಾಮೆ ನೀಡಿ ಮೂರು ತಿಂಗಳಾದರೂ ಅದನ್ನು ಅಂಗೀಕಾರ ಮಾಡಲಿಲ್ಲ. ಅಲ್ಲದೆ, ಪಕ್ಷದಲ್ಲಿ ನಮ್ಮ ಮಾತು ಯಾರೂ ಕೇಳಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಪಕ್ಷದಿಂದ ಹೊರಬರಬೇಕಾಯಿತು. ನ್ಯಾಯಾಲಯದಲ್ಲಿ ನಮಗೆ ನಂಬಿಕೆಯಿದೆ. ಆದರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೆ ನಾವ್ಯಾರೂ ಜನರ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.