ಜೋಧ್ಪುರ : ಆಶ್ರಮದಲ್ಲಿ ಅಪ್ರಾಪ್ತ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೋದ್ಪುರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಉಳಿದ ಇನ್ನಿಬ್ಬರು ದೋಷಿಗಳಿಗೆ 20 ವರ್ಷಗಳ ಜೈಲುವಾಸ ಘೋಷಿಸಿದೆ. 


COMMERCIAL BREAK
SCROLL TO CONTINUE READING

ಜೋಧ್ಪುರ ಸೆಂಟ್ರಲ್ ಜೈಲಿನಲ್ಲಿಯೇ ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸಿದ್ದ ಎಸ್ಸಿ, ಎಸ್ಟಿ ವಿಶೇಷ ಕೋರ್ಟ್ ನ್ಯಾಯಾಧೀಶ ಮಧುಸೂದನ್ ಶರ್ಮಾ ಅವರು 77 ವರ್ಷದ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಸೇರಿ ಮೂವರು ಆರೋಪಿಗಳನ್ನು ಇಂದು ಬೆಳಿಗ್ಗೆ ದೋಷಿ ಎಂದು ಘೋಷಿಸಿ, ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿದ್ದರು. ಇದೀಗ ಶಿಕ್ಷೆ ಪ್ರಮಾಣವನ್ನು ಘೋಷಿಸಿದ್ದು, ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ಮತ್ತು ಉಳಿದ ಅಪರಾಧಿಗಳಿಗೆ 20 ವರ್ಷ ಜೈಲು ವಾಸ ಪ್ರಕಟಿಸಲಾಗಿದೆ. 


2013ರ ಆಗಸ್ಟ್ 15ರಂದು ಅಸಾರಾಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್‌ಪುರದ ಬಾಲಕಿ ದೂರು ನೀಡಿದ್ದಳು. ದೂರು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್‌ನಲ್ಲಿ ಅಸಾರಾಂ ಅವರನ್ನು ಬಂಧಿಸಿ ಜೋಧಪುರಕ್ಕೆ ಕರೆತರಲಾಗಿತ್ತು. ಸೆಪ್ಟೆಂಬರ್ 2ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಅಸಾರಾಂ ವಿರುದ್ಧ ಪ್ರಕರಣಗಳ ಕುರಿತ ಅಂತಿಮ ವಿಚಾರಣೆಯನ್ನು ಏಪ್ರಿಲ್ 7, 2018ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ಏಪ್ರಿಲ್ 25ಕ್ಕೆ ಆದೇಶ ಕಾಯ್ದಿರಿಸಿತ್ತು.