Coronavirus: ಕೊರೊನಾ ವಿರುದ್ಧದ ಹೋರಾಟಕ್ಕೆ 1500 ಕೋಟಿ ರೂ. ಸಹಾಯಹಸ್ತ ಚಾಚಿದ ರತನ್ ಟಾಟಾ
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಟಾಟಾ ಟ್ರಸ್ಟ್ ವತಿಯಿಂದ ರೂ.500 ಕೋಟಿ ಹಾಗೂ ಟಾಟಾ ಸನ್ಸ್ ವತಿಯಿಂದ 1000 ಕೋಟಿ ರೂ. ಘೋಷಣೆಯನ್ನು ಮಾಡಲಾಗಿದೆ.
ನವದೆಹಲಿ: ಭಾರತ ಸೇರಿದಂತೆ ವಿಶ್ವದಲ್ಲಿ ಸದ್ಯ ಕೊರೊನಾ ವೈರಸ್ ವಿರುದ್ಧ ಹೋರಾಟವನ್ನೇ ನಡೆಸಲಾಗುತ್ತಿದೆ. ಭಾರತದಲ್ಲಿ ಇದುವರೆಗೆ ಈ ವೈರಸ್ ಸೋಂಕಿನ ಸುಮಾರು 1037 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೊಂದೆಡೆ ಈ ಮಾರಕ ಕಾಯಿಲೆಗೆ ಸುಮಾರು 25 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಹಾಹಾರಿಯನ್ನು ಹತ್ತಿಕ್ಕಲು ಇದೀಗ ಜನರೂ ಕೂಡ ತಮ್ಮ ಸಹಾಯ ಹಸ್ತ ಚಾಚುತ್ತಿದ್ದಾರೆ. ದೇಶದ ಖ್ಯಾತ ಉದ್ಯಮಿಗಳಲ್ಲಿ ಒಂದಾಗಿರುವ ರತನ್ ಟಾಟಾ ಕೊರೊನಾ ವಿರುದ್ಧದ ಹೋರಾಟದಲ್ಲಿ 1500 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ರತನ್ ಟಾಟಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಟಾಟಾ ಟ್ರಸ್ಟ್ ವತಿಯಿಂದ ರೂ.500 ಕೋಟಿ ಹಾಗೂ ಟಾಟಾ ಸನ್ಸ್ ವತಿಯಿಂದ ರೂ.1000 ಕೋಟಿ ಧನಸಹಾಯ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವೀಟ್ ನಲ್ಲಿ ಹೇಳಿಕೊಂಡಿರುವ ರತನ್ ಟಾಟಾ, ಕೊರೊನಾ ವೈರಸ್ ಸಂಕಟ ದೇಶದ ಕಠಿಣ ಪರಿಸ್ಥಿತಿಗಳಲ್ಲಿ ಅತ್ಯಂತ ಕಠಿಣ ಸವಾಲಾಗಿದ್ದು, ಟಾಟಾ ಸಮೂಹದ ಕಂಪನಿಗಳು ಇಂತಹ ಸಮಯದಲ್ಲಿ ದೇಶದ ಅವಶ್ಯಕತೆಯ ಪರವಾಗಿ ನಿಲ್ಲಲಿವೆ ಹಾಗೂ ಸದ್ಯ ದೇಶಕ್ಕೆ ನಮ್ಮ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.
ಅತ್ತ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ನಟ ಅಕ್ಷಯ್ ಕುಮಾರ್ ಕೂಡ ರೂ.25 ಕೋಟಿ ಹಣವನ್ನು ಪ್ರಧಾನಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬಳಿಕ ಖ್ಯಾತ ಕ್ರಿಕೆಟಿಗರಾಗಿರುವ ಸಚಿನ್ ತೆಂಡೂಲ್ಕರ್ ಹಾಗೂ ಸುರೇಶ ರೈನಾ ಕೂಡ ದೇಣಿಗೆಯನ್ನು ನೀಡಿದ್ದಾರೆ.