ಮುಂಬೈ:  ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಶುಕ್ರವಾರದಂದು ರವಿಶಾಸ್ತ್ರಿ ಅವರನ್ನು ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಆಗಿ ಮರು ನೇಮಕ ಮಾಡಿತು. ಈಗಾಗಲೇ ವಿರಾಟ್ ಕೊಹ್ಲಿ ಶಾಸ್ತ್ರಿ ಅವರನ್ನು ಬೆಂಬಲಿಸಿದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ 2021 ಟಿ 20 ವಿಶ್ವಕಪ್‌ನೊಂದಿಗೆ ಕೊನೆಗೊಳ್ಳುವ ಎರಡು ವರ್ಷಗಳ ಅವಧಿಗೆ ಶಾಸ್ತ್ರಿ ಅವರನ್ನು ಮತ್ತೆ ನೇಮಕ ಮಾಡಲಾಗಿದೆ. ರವಿಶಾಸ್ತ್ರಿ ಇದುವರೆಗೆ ಕ್ರಿಕೆಟ್ ವ್ಯವಸ್ಥಾಪಕ (2007 ರ ಬಾಂಗ್ಲಾದೇಶ ಪ್ರವಾಸ), ತಂಡದ ನಿರ್ದೇಶಕ (2014-2016) ಮತ್ತು ಮುಖ್ಯ ತರಬೇತುದಾರ (2017-2019) ಆಗಿ ಸಂಕ್ಷಿಪ್ತವಾಗಿ ಸೇವೆ ಸಲ್ಲಿಸಿದ್ದಾರೆ. ಇದು ಅವರಿಗೆ ಈಗ ನಾಲ್ಕನೆ ಅವಕಾಶವಾಗಿದೆ.



ರವಿಶಾಸ್ತ್ರಿ ಭಾರತದ ಮಾಜಿ ತಂಡದ ಆಟಗಾರರಾದ ರಾಬಿನ್ ಸಿಂಗ್ ಮತ್ತು ಲಾಲ್‌ಚಂದ್ ರಜಪೂತ್  ಹಾಗೂ ನ್ಯೂಜಿಲೆಂಡ್‌ನ ಮಾಜಿ ತರಬೇತುದಾರ ಮೈಕ್ ಹೆಸ್ಸನ್ ಮತ್ತು ಆಸ್ಟ್ರೇಲಿಯಾದ ಟಾಮ್ ಮೂಡಿ ಅವರನ್ನು ಹಿಂದಿಕ್ಕಿ ಈ ಸ್ಥಾನಕ್ಕೆ ಮರು ನೇಮಕಗೊಂಡಿದ್ದಾರೆ.ಮಾಜಿ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತರಬೇತುದಾರ ಫಿಲ್ ಸಿಮ್ಮನ್ಸ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹಿಂದೆ ಸರಿದರು.



ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 'ಮೂರನೆಯ ಸ್ಥಾನ ಟಾಮ್ ಮೂಡಿ, ಎರಡನೆಯ ಸ್ಥಾನ ಮೈಕ್ ಹೆಸ್ಸನ್. ನೀವೆಲ್ಲರೂ ನಿರೀಕ್ಷಿಸಿದಂತೆ ನಂಬರ್ ಒನ್ ರವಿಶಾಸ್ತ್ರಿ ...ಎಂದು ಕಪಿಲ್ ಪತ್ರಿಕಾಗೋಷ್ಠಿಯಲ್ಲಿ ಇಲ್ಲಿ ನಿರ್ಧಾರವನ್ನು ಪ್ರಕಟಿಸಿದರು.


ರವಿಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತಂಡವು ಟೆಸ್ಟ್ ಪಂದ್ಯಗಳಲ್ಲಿ ನಂ.1 ಶ್ರೇಯಾಂಕವನ್ನು ತಲುಪಿದೆ ಅಲ್ಲದೆ ಮತ್ತು 71 ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿದೆ. ಈ ಹಿನ್ನಲೆಯಲ್ಲಿ ಶಾಸ್ತ್ರಿ ಅವರ ದಾಖಲೆಗೆ ಯಾರು ಸರಿ ಸಾಟಿಯಾಗದಿರುವುದರಿಂದ ಸಲಹಾ ಸಮಿತಿ ಕೊನೆಗೆ ಅವರಿಗೆ ಮಣೆ ಹಾಕಿತು ಎನ್ನಲಾಗಿದೆ.