ಆರ್ಬಿಐನಿಂದ 0.25% ರೆಪೋ ದರ ಇಳಿಕೆ; ಗೃಹ, ವಾಹನ ಸಾಲ ಇನ್ನು ಅಗ್ಗ
ಊರ್ಜಿತ್ ಪಟೇಲ್ ನಿರ್ಗಮನದ ಬಳಿಕದಲ್ಲಿ ಇದೇ ಮೊದಲ ಬಾರಿಗೆ ದ್ವೆಮಾಸಿಕ ನೀತಿ ಪರಾಮರ್ಶೆ ವರದಿಯನ್ನು ಪ್ರಕಟಿಸಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸುಮಾರು 17 ತಿಂಗಳುಗಳ ಬಳಿಕ ತನ್ನ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿ ಶೇ.6.25ಕ್ಕೆ ನಿಗದಿಪಡಿಸಿದೆ. ಆರ್‌ಬಿಐನ ಈ ನಿರ್ಧಾರದಿಂದಾಗಿ ಗೃಹ ಹಾಗೂ ವಾಹನ ಸಾಲಗಳು ಅಗ್ಗವಾಗಲಿದ್ದು, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರದಲ್ಲೂ ಇಳಿಕೆ ಆಗಲಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ವಿತ್ತೀಯ ನೀತಿ ಸಮಿತಿಯು ತನ್ನ ಆರನೇ ದ್ವೆಮಾಸಿಕ ವಿತ್ತೀಯ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ. ಪರಿಣಾಮವಾಗಿ, ರಿವರ್ಸ್ ರೆಪೋ ದರ ಶೇ. 6.25 ರಿಂದ ಶೇ. 6ಕ್ಕೆ ಇಳಿದಿದೆ.
ಗುರುವಾರ ನಡೆದ ಆರ್‌ಬಿಐನ ಆರು ಸದಸ್ಯರ ಪಾಲಿಸಿ ಸಮಿತಿ ಸಭೆಯಲ್ಲಿ ಈ ಕ್ರಮದ ನಿರ್ಧಾರಕ್ಕೆ ಬರಲಾಗಿದೆ. ಶಕ್ತಿಕಾಂತ ದಾಸ್ ಆರ್‌ಬಿಐನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೈಗೊಂಡ ಮೊದಲ ನಿರ್ಧಾರ ಇದಾಗಿದ್ದು, ಈ ಮೊದಲು ಆರ್‌ಬಿಐ ರೆಪೋದರ ಬದಲಾವಣೆಗೆ ಸಮ್ಮತಿಸಿರಲಿಲ್ಲ.
ಇನ್ನು ಗೃಹ ಮತ್ತು ವಾಹನ ಸಾಲಗಳು ಆರ್‌ಬಿಐನ ರೆಪೋ ದರಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಆರ್‌ಬಿಐ ರೆಪೋ ದರ ಕಡಿಮೆಯಾದಾಗ ಬ್ಯಾಂಕುಗಳು ಸಾಲಗಾರರಿಗೆ ಕಡಿಮೆ ಬಡ್ಡಿದರ ವಿಧಿಸುತ್ತವೆ. ಹೀಗಾಗಿ ಬ್ಯಾಂಕುಗಳು ಮನೆ ಹಾಗೂ ವಾಹನ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆಯಿದ್ದು, ಮಧ್ಯಮವರ್ಗದವರಿಗೆ ಅನುಕೂಲವಾಗಲಿದೆ.
ರೆಪೋ ದರ ಎಂದರೇನು?
ಆರ್‌ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ.