ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನಿರೀಕ್ಷೆಯಂತೆ ಸತತ ಎರಡನೇ ಬಾರಿಗೆ ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಇಂದು ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಆರ್‌ಬಿಐ ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಸಭೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯನ್ನು ಬಲಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಲಾಗಿದೆ. ಆರ್‌ಬಿಐನ ಈ ನಿರ್ಧಾರದಿಂದಾಗಿ ಗೃಹ ಹಾಗೂ ವಾಹನ ಸಾಲಗಳು ಅಗ್ಗವಾಗಲಿದ್ದು, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರದಲ್ಲೂ ಇಳಿಕೆ ಆಗಲಿದೆ.


ಫೆಬ್ರವರಿ ತಿಂಗಳಿನಲ್ಲಿ ಸುಮಾರು 17 ತಿಂಗಳುಗಳ ಬಳಿಕ ವಿತ್ತೀಯ ನೀತಿ ಸಮಿತಿಯು ತನ್ನ ಆರನೇ ದ್ವೆಮಾಸಿಕ ವಿತ್ತೀಯ ಸಭೆಯಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿತ್ತು. ಇದರ ಪರಿಣಾಮವಾಗಿ ರಿವರ್ಸ್ ರೆಪೋ ದರ ಶೇ.6.50 ರಿಂದ ಶೇ.6.25ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ ಆರ್‌ಬಿಐ ರೆಪೋ ದರವನ್ನು ಶೇ.0.25 ಕಡಿತಗೊಳಿಸಿದ್ದು ಶೇ.6ಕ್ಕೆ ತಲುಪಲಿದೆ. 


ರೆಪೋ ದರ ಇಳಿಕೆಯಿಂದ ಗೃಹ ಸಾಲದ ಬಡ್ಡಿ ಕಡಿತ:
ಗೃಹ ಮತ್ತು ವಾಹನ ಸಾಲಗಳು ಆರ್‌ಬಿಐನ ರೆಪೋ ದರಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಆರ್‌ಬಿಐ ರೆಪೋ ದರ ಕಡಿಮೆಯಾದಾಗ ಬ್ಯಾಂಕುಗಳು ಸಾಲಗಾರರಿಗೆ ಕಡಿಮೆ ಬಡ್ಡಿದರ ವಿಧಿಸುತ್ತವೆ. ಹೀಗಾಗಿ ಬ್ಯಾಂಕುಗಳು ಮನೆ ಹಾಗೂ ವಾಹನ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆಯಿದ್ದು, ಮಧ್ಯಮವರ್ಗದವರಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಇಎಂಐ ಕೂಡಾ ಕಡಿಮೆಯಾಗಲಿದೆ.


ರೆಪೋ ದರ ಎಂದರೇನು?
ಆರ್​ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ.