ನೋಟು ನಿಷೇಧವಾಗಿ 21 ತಿಂಗಳಾಯ್ತು! ಹಾಗಾದರೆ ವಾಪಸ್ ಬಂದಿದೆಷ್ಟು ಗೊತ್ತೇ?
ರದ್ದುಗೊಳಿಸಲಾಗಿದ್ದ 500, 1000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ. 99.3 ರಷ್ಟು ಹಣ ಬ್ಯಾಂಕುಗಳಿಗೆ ಮರಳಿದೆ ಎಂದು ಹಣಕಾಸು ವರ್ಷ 2017-18 ರ ವಾರ್ಷಿಕ ವರದಿಗಳಲ್ಲಿ ಆರ್ಬಿಐ ತಿಳಿಸಿದೆ.
ನವದೆಹಲಿ: ನೋಟು ನಿಷೇಧವಾಗಿ ಸುಮಾರು ಎರಡು ವರ್ಷಗಳ ನಂತರ, 500 ಮತ್ತು 1000 ರೂ. ಎಷ್ಟು ಹಣ ವಾಪಸ್ ಬಂದಿದೆ ಎಂಬುದರ ಲೆಕ್ಕಾಚಾರ ಮುಗಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ. ರದ್ದುಗೊಳಿಸಲಾಗಿದ್ದ 500, 1000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ. 99.3 ರಷ್ಟು ಹಣ ಬ್ಯಾಂಕುಗಳಿಗೆ ಮರಳಿದೆ ಎಂದು ಹಣಕಾಸು ವರ್ಷ 2017-18 ರ ವಾರ್ಷಿಕ ವರದಿಗಳಲ್ಲಿ ಆರ್ಬಿಐ ತಿಳಿಸಿದೆ. 500, 1000 ರೂ. ಮುಖಬೆಲೆಯ 15.41 ಲಕ್ಷ ಕೋಟಿ ರೂ. ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ. ಇದರಲ್ಲಿ 15.13 ಲಕ್ಷ ಕೋಟಿಯನ್ನು ಬ್ಯಾಂಕುಗಳಿಗೆ ಹಿಂದಿರುಗಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ನೋಟು ನಿಷೇಧದ ನಂತರ ಎಷ್ಟು ಹಳೆಯ ನೋಟುಗಳು ಮಾರುಕಟ್ಟೆಯಿಂದ ಹೊರಬಂದಿದ್ದವೋ ಅದಕ್ಕಿಂತ ಹೆಚ್ಚು ಹಣ ಈಗ ಚಲಾವಣೆಯಲ್ಲಿದೆ ಎಂದು ಆರ್ಬಿಐ ಹೇಳಿದೆ. ಮಾರ್ಚ್ 2018ರ ವರೆಗೆ 18.03 ಲಕ್ಷ ಕೋಟಿ ರೂಪಾಯಿ ಚಾಲನೆಯಲ್ಲಿದ್ದು, ಇದು ದೇಶದಲಿ ಜನರ ಬಳಿ ಇರುವ ದಾಖಲೆಯ ಮಟ್ಟದ ನೋಟುಗಳ ಪ್ರಮಾಣವಾಗಿದೆ ಎಂದು ಕಳೆದ ಜೂನ್ ನಲ್ಲಿ ಆರ್ಬಿಐ ತಿಳಿಸಿತ್ತು. ದೇಶದಲ್ಲಿ ಚಲಾವಣೆಗೆ ತರಲಾಗಿರುವ ಒಟ್ಟು ನೋಟುಗಳ ಸಂಖ್ಯೆ ಪ್ರಸ್ತುತ 19.3 ಲಕ್ಷ ಕೋಟಿ ತಲುಪಿದ್ದು, 2016ರಲ್ಲಿ ಇದು 8.9 ಲಕ್ಷ ಕೋಟಿಗಳಷ್ಟಿತ್ತು ಎಂದು ಆರ್ಬಿಐ ಮಾಹಿತಿ ನೀಡಿತ್ತು.
ನವೆಂಬರ್ 8, 2016ರಂದು ನೋಟು ನಿಷೇಧದ ಸಮಯದಲ್ಲಿ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ 15.41 ಲಕ್ಷ ಕೋಟಿ. ರೂ. ಮೌಲ್ಯದ 500, 1000 ರೂ. ಮುಖಬೆಲೆಯ ನೋಟುಗಳ ಪೈಕಿ 15.31 ಲಕ್ಷ ಕೋಟಿ ಮೌಲ್ಯದ ನೋಟುಗಳು ವಾಪಸಾಗಿವೆ. ರೂ. 10,720 ಕೋಟಿ ಮೌಲ್ಯದ ನೋಟುಗಳಷ್ಟೇ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿಲ್ಲ ಎಂದು ಹೇಳಿತ್ತು.