ಶಿರಡಿ: ಮಹಾರಾಷ್ಟ್ರದಲ್ಲಿ ಶಿರಡಿಯ ಸಾಯಿಬಾಬಾ ಅವರ ಜನ್ಮಸ್ಥಾನದ ಕುರಿತು ಇದೀಗ ವಿವಾದ ಹುಟ್ಟಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವ ಶಿರಡಿಯ ನಾಗರಿಕರು ಬಾಬಾ ಇರುವವರೆಗೆ ತಮ್ಮ ಜನ್ಮ ಸ್ಥಾನದ ಕುರಿತು ಯಾವುದೇ ರೀತಿಯ ಉಲ್ಲೇಖ ಮಾಡಿಲ್ಲ. ಜನರ ಮಧ್ಯೆ ಇದ್ದುಕೊಂಡು 'ಸಬ್ ಕಾ ಮಾಲೀಕ್ ಏಕ್' ಸಂದೇಶ ಸಾರಿದ ಬಾಬಾ ಸಮಾಜದಲ್ಲಿ ಪ್ರೀತಿಯನ್ನು ಹಂಚಿದ್ದಾರೆ. ಇಂತಹುದರಲ್ಲಿ ಅವರ ಜನ್ಮ ಸ್ಥಾನದ ಕುರಿತು ವಿವಾದ ಹುಟ್ಟುಹಾಕುವುದು ತಪ್ಪು ಎಂದು ಶಿರಡಿಯ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸಭೆ ನಡೆಸಿರುವ ಶಿರಡಿಯ ಗ್ರಾಮ ಪಂಚಾಯ್ತಿ ಬರುವ ಶನಿವಾರದಿಂದ ಅನಿಶ್ಚಿತ ಕಾಲದವರೆಗೆ ಶಿರಡಿ ಬಂದ್ ಗೆ ಕರೆ ನೀಡಿದೆ. ಇದರಿಂದ ಶಿರಡಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಎರಡು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಭಣಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಸಾಯಿ ಬಾಬಾ ಅವರ ಜನ್ಮಸ್ಥಾನವಾಗಿರುವ ಪಥರಿ ಗ್ರಾಮದ ವಿಕಾಸಕ್ಕಾಗಿ ತಮ್ಮ ಸರ್ಕಾರ 100 ಕೋಟಿ ರೂ.ಗಿಂತ ಅಧಿಕ ವೆಚ್ಚ ಮಾಡಲಿದೆ ಎಂದು ಘೋಶಿಸಿದ್ದರು. ಪಥರಿ ಗ್ರಾಮ ಪರಭಣಿ ಜಿಲ್ಲೆಗೆ ಸೇರಿದ್ದು, ಶಿರಡಿಯಿಂದ ಸುಮಾರು 250 ಕಿಮೀ ದೂರದಲ್ಲಿದೆ. ಇಲ್ಲಿ ಶ್ರೀಸಾಯಿ ಜನ್ಮ ಮಂದಿರ ಕೂಡ ಇದೆ.


ಈ ಕುರಿತು ಮಾತನಾಡಿದ್ದ ಮುಖ್ಯಮಂತ್ರಿಗಳು ಪಥರಿ ಒಂದು ಗ್ರಾಮವಾಗಿದ್ದು, ಇಲ್ಲಿ ಶ್ರೀ ಸಾಯಿ ಜನ್ಮವಾಗಿತ್ತು. ಶೀಘ್ರದಲ್ಲಿಯೇ ಅಲ್ಲಿ ಭೂಮಿ ಪೂಜೆ ನಡೆಸಲಾಗುವುದು ಹಾಗೂ ಮಹಾರಾಷ್ಟ್ರ ಸರ್ಕಾರ ಅತಿ ಶೀಘ್ರದಲ್ಲಿಯೇ ಪಥರಿಯನ್ನು ಒಂದು ತೀರ್ಥಕ್ಷೇತ್ರವಾಗಿ ಅಭಿವೃದ್ಧಿಗೊಳಿಸಲಿದೆ ಎಂದಿದ್ದರು.


ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಶ್ರಿರಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಬಾಬಾ ಜನ್ಮಸ್ಥಾನದ ಕುರಿತು ಮುಖ್ಯಮಂತ್ರಿಗಳ ಹೇಳಿಕೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಗ್ರಾಮಪಂಚಾಯ್ತಿ ಸಭೆಯೊಂದನ್ನು ನಡೆಸಿದ್ದು, ಶನಿವಾರದಿಂದ ಅನಿಶ್ಚಿತಕಾಲದವರೆಗೆ ಶಿರಡಿ ಬಂದ್ ಗೆ ಕರೆ ನೀಡಲು ನಿರ್ಧರಿಸಿದೆ. ಆದರೆ, ಈ ಬಂದ್ ನಿಂದ ದೇವಸ್ಥಾನದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಹಾಗೂ ದೇವಸ್ಥಾನ ಎಂದಿನಂತೆ ಭಕ್ತರಿಗಾಗಿ ದರ್ಶನಕ್ಕೆ ತೆರೆದುಕೊಳ್ಳಲಿದೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಆದರೆ, ಶಿರಡಿ ಬಂದ್ ಇರುವ ಕಾರಣ ಹೊರಗಿನಿಂದ ಬರುವ ಭಕ್ತಾದಿಗಳು ತೊಂದರೆ ಅನುಭವಿಸುವ ಸಾಧ್ಯತೆ ಇದೆ.