ಬೆಂಗಳೂರು: ಕಾಂಗ್ರೆಸ್​ನ ಟ್ರಬಲ್ ಶೂಟರ್ ಎಂದೇ ಬಣ್ಣಿಸಲಾಗುವ ಡಿ.ಕೆ. ಶಿವಕುಮಾರ್ ಅತೃಪ್ತ ಶಾಸಕರನ್ನು ಮನವೊಲಿಸಲು ಮುಂಬೈ ತಲುಪಿದ್ದಾರೆ.ಇಂದು ಮುಂಜಾನೆ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳುವುದಾಗಿ ಮಾಹಿತಿ ನೀಡಿರುವ ಡಿಕೆಶಿ ಅವರೊಂದಿಗೆ ಶಿವಲಿಂಗೇಗೌಡ ಸೇರಿದಂತೆ ಜೆಡಿಎಸ್​ನ ಕೆಲವು ಶಾಸಕರೂ ತೆರಳುವುದಾಗಿ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಅತೃಪ್ತ ಶಾಸಕರನ್ನು ಮನವೊಲಿಸುವ ವಿಶ್ವಾಸ ವ್ಯಕ್ತಪಡಿಸಿದರು. ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವು ಶಾಸಕರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಯಾವ ಶಾಸಕರೂ ಕೂಡ ಪಕ್ಷ ಬಿಟ್ಟು ಹೋಗಲ್ಲ. ಅವರೆಲ್ಲರನ್ನೂ ವಾಪಸ್ ಕರೆತರಲು ತಾವೇ ಮುಂಬೈಗೆ ಹೋಗುತ್ತಿರುವುದಾಗಿ ತಿಳಿಸಿದ್ದರು.


ಇತ್ತ ಡಿಕೆಶಿ ತಾವು ಮುಂಬೈಗೆ ತೆರಳುತ್ತಿರುವುದನ್ನು ಸ್ಪಷ್ಟಪದಿಸುತ್ತಿದ್ದಂತೆ ಅತ್ತ ಮುಂಬೈನಲ್ಲಿ ಬೀಡು ಬಿಟ್ಟಿರುವ ರೆಬೆಲ್ ಶಾಸಕರು, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸ‌ಚಿವ ಡಿ.ಕೆ.ಶಿವಕುಮಾರ್ ರಿಂದ ರಕ್ಷಣೆ ಕೊಡಿ ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 


"ನಾವು ಮುಂಬೈನ ಹೋಟೆಲ್ ರೆನೈಸೆನ್ಸ್ ಪೊವಾಯ್ನಲ್ಲಿ ಉಳಿದುಕೊಂಡಿದ್ದೇವೆ, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸ‌ಚಿವ ಡಿ.ಕೆ.ಶಿವಕುಮಾರ್ ಹೋಟೆಲ್ ಗೆ ಬರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ನಮಗೆ ಆತಂಕ ಎದುರಾಗಿದೆ. ಹಾಗಾಗಿ ಅವರನ್ನು ಹೋಟೆಲ್ ಆವರಣ ಪ್ರವೇಶಿಸಲು ಅನುಮತಿಸಬೇಡಿ" ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಬಂಡಾಯ ಶಾಸಕರು ಪತ್ರಕ್ಕೆ ಸಹಿ ಹಾಕಿದ್ದಾರೆ.




ಮಹಾರಾಷ್ಟ್ರ ರಾಜ್ಯ ರಿಸರ್ವ್ ಪೊಲೀಸ್ ಪಡೆ ಮತ್ತು ಗಲಭೆ ನಿಯಂತ್ರಣ ಪೊಲೀಸರು 10 ಬಂಡಾಯ ಕರ್ನಾಟಕ ಕಾಂಗ್ರೆಸ್-ಜೆಡಿ (ಎಸ್) ಶಾಸಕರು ತಂಗಿರುವ ಹೋಟೆಲ್‌ಗೆ ಆಗಮಿಸಿದ್ದು, ಹೋಟೆಲ್ ಸುತ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ.