ಹೋಟೆಲ್‌ನಲ್ಲಿ ಡಿಕೆಶಿಗೆ ನೋ ಎಂಟ್ರಿ: ಹಿಂದಿನ ಗೇಟ್ನಿಂದ ಎಸ್ಕೇಪ್ ಆದ ಅತೃಪ್ತ ಶಾಸಕರು!
ಬೆಳಿಗ್ಗೆ 08:15ರಿಂದ ರೆನೈಸನ್ಸ್ ಹೋಟೆಲ್ ಮುಂದಿನ ಗೇಟ್ನಲ್ಲಿ ಡಿ.ಕೆ. ಶಿವಕುಮಾರ್ ಕಾಯುತ್ತಿದ್ದರೆ, ಹಿಂದಿನ ಗೇಟ್ನಿಂದ ಬೇರೆಡೆ ಸ್ಥಳಾಂತರಗೊಂಡ ಅತೃಪ್ತ ಶಾಸಕರು.
ಮುಂಬೈ: ಮುಂಬೈನ ರಿನೈಸೆನ್ಸ್ ಹೋಟೆಲ್‌ನಲ್ಲಿರುವ ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರನ್ನು ಭೇಟಿಯಾಗಿ ಮನವೊಲಿಸುವ ಉದ್ದೇಶದಿಂದ ತೆರಳಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಮುಂದಿನ ಗೇಟ್ನಲ್ಲಿ ಪೊಲೀಸರು ತಡೆಹಿಡಿದಿದ್ದರೆ, ಅತೃಪ್ತ ಶಾಸಕರು ಹಿಂಬದಿಯ ಗೇಟ್ನಿಂದ ಎಸ್ಕೇಪ್ ಆಗಿದ್ದಾರೆ.
ಬಂಡಾಯ ಶಾಸಕರನ್ನು ಭೇಟಿಯಾಗಿ ಮನವೊಲಿಸುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ ಹಾಗೂ ಶಾಸಕ ಶಿವಲಿಂಗೇಗೌಡ ನೇತೃತ್ವದ ತಂಡ ಇಂದು ಮುಂಜಾನೆ ಮುಂಬೈಗೆ ತೆರಳಿತ್ತು. ಆದರೆ ಹೋಟೆಲ್ ಮುಂಭಾಗದಲ್ಲೇ ಪೊಲೀಸರು ಅವರನ್ನು ತಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ನಾನು ನನ್ನ ಸ್ನೇಹಿತರನ್ನು ಭೇಟಿ ಮಾಡಿ ಮಾತನಾಡಲು ಬಂದಿದ್ದೇನೆ. ನಾನು ಇದೇ ಹೋಟೆಲ್‌ನಲ್ಲಿ ಒಂದು ರೂಂ ಬುಕ್ ಕಾಯ್ದಿರಿಸಿದ್ದೇನೆ. ನನ್ನ ಸ್ನೇಹಿತರೂ ಇಲ್ಲಿಯೇ ಇದ್ದಾರೆ. ಒಂದು ಸಣ್ಣ ಸಮಸ್ಯೆ ಇದೇ, ನನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸಬೇಕಿದೆ. ನಾವು ಅವರಿಗೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ. ನಾವು ಪರಸ್ಪರ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದಿದ್ದರು.
ಈ ನಡುವೆಯೇ ಅತೃಪ್ತ ಶಾಸಕರು ರಿನೈಸೆನ್ಸ್ ಹೋಟೆಲ್‌ನಿಂದ ಬೇರೇಡೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ.