ಖ್ಯಾತ ಮಲಯಾಳಂ ಲೇಖಕಿ ಆಶಿತಾ ನಿಧನ
ಪ್ರಸಿದ್ಧ ಕವಿತೆಗಳು, ಅನುವಾದಗಳು, ಸಣ್ಣ ಕಥೆಗಳು ಮತ್ತು ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಸುಮಾರು 20ಕ್ಕೂ ಅಧಿಕ ಪುಸ್ತಕಗಳನ್ನು ಆಶಿತಾ ಬರೆದಿದ್ದಾರೆ.
ತ್ರಿಶೂರ್: ಖ್ಯಾತ ಮಲಯಾಳಂ ಲೇಖಕಿ ಹಾಗೂ ಕವಯಿತ್ರಿ ಆಶಿತಾ ಮಂಗಳವಾರ ತಡರಾತ್ರಿ ಕೇರಳದ ತ್ರಿಶೂರ್ ನಲ್ಲಿ ನಿಧನರಾಗಿದ್ದಾರೆ. ಇವರಿಗೆ 63 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ತೀವ್ರ ಏರಿಳಿತ ಕಂಡುಬಂದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ತ್ರಿಶೂರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ತಡರಾತ್ರಿ 12.55ಕ್ಕೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 5, 1956 ರಂದು ತ್ರಿಶೂರ್ ನಲ್ಲಿ ಜನಿಸಿದ ಅಶಿತಾ ಅವರು ದೆಹಲಿ ಮತ್ತು ಮುಂಬೈನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಬಳಿಕ ಎರ್ನಾಕುಲಂನ ಮಹಾರಾಜ ಕಾಲೇಜಿನಿಂದ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಪ್ರಸಿದ್ಧ ಕವಿತೆಗಳು, ಅನುವಾದಗಳು, ಸಣ್ಣ ಕಥೆಗಳು ಮತ್ತು ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಸುಮಾರು 20ಕ್ಕೂ ಅಧಿಕ ಪುಸ್ತಕಗಳನ್ನು ಆಶಿತಾ ಬರೆದಿದ್ದಾರೆ. 'ವಿಸ್ಮಯ ಚಿಹನಂಗಲ್,' 'ಅಪೂರ್ಣ ವಿರಾಮಾಂಗಲ್,' 'ಅಶಿಥಾಯುಡ್ ಕಥಕ್ಕಲ್' 'ಮಝಮೇಂಗಂಗಲ್' ಅವರ ಕೆಲವು ಪ್ರಸಿದ್ಧ ಕೃತಿಗಳು.
ಮಲಯಾಳಂ ಸಾಹಿತ್ಯದಲ್ಲಿ ಅವರ ಸಾಧನೆಗಾಗಿ ಪ್ರತಿಷ್ಠಿತ ಎಡೆಸರ್ರಿ ಪ್ರಶಸ್ತಿ (1986) ಮತ್ತು ಲಲಿತಾಂಬಿಕ ಅಂತರ್ಜನಂ ಪ್ರಶಸ್ತಿ (1994) ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಮೃತರು ಪತಿ ಕೆ.ವಿ.ರಾಮಾನ್ಕುಟ್ಟಿ ಮತ್ತು ಪುತ್ರಿ ಉಮಾ ಪ್ರಸೀದಾ ಅವರನ್ನು ಅಗಲಿದ್ದಾರೆ.