ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಹೊರಬರುತ್ತಿದ್ದು, ದೇಶದ ಜನತೆ ಸತತ ಎರಡನೇ ಬಾರಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ದಾಖಲೆಯ ಮತದಾನದೊಂದಿಗೆ ಆಯ್ಕೆ ಮಾಡಿದೆ. ಒಂದೆಡೆ ಮೋದಿ ಅಲೆಯೊಂದಿಗೆ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿದೆ. ಇದರ ಬೆನ್ನಲ್ಲೇ 2019ರ ಲೋಕಸಭಾ ಚುನಾವಣೆ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಕಾಂಗ್ರೆಸ್ ನಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 2019ರ ಲೋಕಸಭಾ ಚುನಾವಣೆ ಸೋಲಿನ 100 ಪ್ರತಿಶತ ಜವಾಬ್ದಾರಿ ನನ್ನದು. ನಾವು ದೇಶದ ಜನತೆಯ ಆದೇಶವನ್ನು ಸ್ವೀಕರಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ವಿಜಯಕ್ಕಾಗಿ ಅನಂತ ಅಭಿನಂದನೆಗಳು. ಜನರು ಅವರ ನಿರ್ಧಾರವನ್ನು ತಿಳಿಸಿದ್ದಾರೆ. ದೇಶದ ಬಹುಪಾಲು ಜನರು ಕಾಂಗ್ರೆಸಿನ ಸಿದ್ಧಾಂತವನ್ನು ಪರಿಗಣಿಸುತ್ತಾರೆ ಎಂದು ನಮಗೆ ತಿಳಿದಿದೆ. 


ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರ ಗೆಲುವಿಗೆ ಅಭಿನಂದನೆಗಳು. ಅಮೇಥಿ ಜನತೆಯ ತೀರ್ಪನ್ನು ಸ್ವೀಕರಿಸುತ್ತೇವೆ. ಇದು ಪ್ರಜಾಪ್ರಭುತ್ವ, ಜನರ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದರು.


ಆ ಬಳಿಕ ಲೋಕಸಭಾ ಚುನಾವಣೆ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿತ್ತು.