ನವದೆಹಲಿ: ಇಂದು ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮ. ಈ ಸಂದರ್ಭದಲ್ಲಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣಕ್ಕಾಗಿ ಇಡೀ ದೇಶವೂ ಕಾತುರದಿಂದ ಕಾಯುತ್ತಿದೆ. ಅದರಲ್ಲೂ 2019 ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಗಣರಾಜ್ಯೋತ್ಸವ ಇದಾಗಿರುವುದರಿಂದ ಮತ್ತಷ್ಟು ಕುತೂಹಲ ಮೂಡಿಸಿದೆ.


COMMERCIAL BREAK
SCROLL TO CONTINUE READING

 



ಇಂಡಿಯಾ ಗೇಟ್​ ಬಳಿ ಇರುವ ಅಮರ್​ ಜವಾನ್​ ಜ್ಯೋತಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಆಚರಣೆಗೆ ಚಾಲನೆ ನೀಡಿದ್ದು, ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೊಸ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಿಗೆ ಸಾಥ್​ ನೀಡಿದ್ದಾರೆ.



ಗಾಂಧೀಜಿ ಅವರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಂದ ಸ್ತಬ್ಧ ಚಿತ್ರಗಳ ಗೌರವ ಸಲ್ಲಿಸಲಾಗುತ್ತಿದ್ದು, ಗಾಂಧೀಜಿ ನೆನಪುಗಳ ಅನಾವರಣವಾಗಲಿದೆ. ರಾಜಪಥ ಮಾರ್ಗದಲ್ಲಿ ನಡೆಯುವ ಪಥಸಂಚಲನದಲ್ಲಿ ಲೆಪ್ಟಿನೆಂಟ್ ಭಾವನಾ ಕಸ್ತೂರಿ ಅವರು 144 ಯೋಧರ ತಂಡವನ್ನು ಮುನ್ನಡೆಸಲಿದ್ದು, ಈ ಮೂಲಕ ಗಣರಾಜ್ಯೋತ್ಸವ ಪರೇಡ್​ನಲ್ಲಿ ಇದೇ ಮೊದಲ ಬಾರಿಗೆ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ ವಹಿಸುತ್ತಿದ್ದಾರೆ. ಓರ್ವ ಮಹಿಳಾ ಅಧಿಕಾರಿ ಬೈಕ್​ ಸಾಹಸವನ್ನೂ ಪ್ರದರ್ಶಿಸಲಿದ್ದಾರೆ. 


ಗಮನ ಸೆಳೆಯಲಿರುವ ಸ್ತಬ್ಧಚಿತ್ರಗಳು
ವಿಜಯ ಚೌಕದಿಂದ  ಬೆಳಗ್ಗೆ 9:50ಕ್ಕೆ ಪಥಸಂಚಲನ ಆರಂಭವಾಗಲಿದ್ದು, ರಾಜಪಥ, ತಿಲಕ್​ ಮಾರ್ಗ, ಬಹದ್ದೂರ್​ ಶಾ ಝಫರ್​ ಮಾರ್ಗ, ನೇತಾಜಿ ಸುಭಾಷ್ ಮಾರ್ಗವಾಗಿ ಸಾಗಿ ಕೆಂಪು ಕೋಟೆ ತಲುಪಲಿದೆ. 90 ನಿಮಿಷಗಳ ಪೆರೇಡ್​ನಲ್ಲಿ ವಿವಿಧ ರಾಜ್ಯಗಳ ಹಾಗೂ ಸರ್ಕಾರಿ ಇಲಾಖೆಗಳ 22 ಸ್ತಬ್ಧಚಿತ್ರಗಳ ಪ್ರದರ್ಶನ ಸಹ ನಡೆಯಲಿದೆ. 


ಸೇನಾ ಬಲ ಪ್ರದರ್ಶನ
ಗಣರಾಜ್ಯೋತ್ಸವದ ಪರೇಡ್​ನಲ್ಲಿ ಜೈವಿಕ ಇಂಧನದ ಮೂಲಕ ಹಾರಾಟ ನಡೆಸುವ ಎಎನ್-32 ಯುದ್ದ ವಿಮಾನ ಪರೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೇ ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವ ಅಮೆರಿಕಾದ ಎಂ 777 ಎ-2 ಆರ್ಟಿಲರಿ ಗನ್ ಹಾಗೂ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡಿರುವ ಕೆ-9 ವಜ್ರ ಆರ್ಟಿಲರಿ ಗನ್​ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿರುವ ಮಧ್ಯಮ ಶ್ರೇಣಿಯ ಏರ್ ಮಿಸೈಲ್, ಅರ್ಜುನ ಟ್ಯಾಂಕ್​ಗಳ ರಕ್ಷಣೆಗೆಂದು ನಿರ್ಮಾಣಗೊಂಡಿರುವ ಆರ್ಮಡ್​ ರಿಕವರಿ ವೆಹಿಕಲ್ (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಕೂಡಾ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿದೆ.


ದೆಹಲಿಯಲ್ಲಿ ಬಿಗಿ ಬಂದೋಬಸ್ತ್
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ 25ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, 36 ಮಹಿಳಾ ಕಮಾಂಡರ್​ಗಳು, ಮೊಬೈಲ್​ ಹಿಟ್​ ಟೀಂ, ಆ್ಯಂಟಿ ಏರ್​ಕ್ರಾಫ್ಟ್​ ಗನ್ಸ್​ ಹಾಗೂ ಶಾರ್ಪ್​ ಶೂಟರ್​ಗಳನ್ನು ವ್ಯವಸ್ಥಿತ ತಾಣಗಳಲ್ಲಿ, ರಾಜಪಥದಿಂದ ಕೆಂಪು ಕೋಟೆವರೆಗಿನ 8 ಕಿ.ಮೀ.ವರೆಗೆ ನಿಯೋಜಿಸಲಾಗಿದೆ. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ, ಮುಖ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಡ್ರೋಣ್ ತಂತ್ರಜ್ಞಾನವನ್ನೂ ಸುರಕ್ಷತಾ ದೃಷ್ಟಿಯಿಂದ ಬಳಸಿಕೊಳ್ಳಲಾಗುತ್ತಿದೆ. ಗಣರಾಜ್ಯೋತ್ಸವದ ದಿನ ನವದೆಹಲಿಯಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಆರೋಪದ ಮೇಲೆ ಜೈಶ್​-ಇ-ಮಹಮ್ಮದ್​ ಸಂಘಟನೆಯ ಇಬ್ಬರು ಶಂಕಿತರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.