ಕಳಸಾ-ಬಂಡೂರಿ ಯೋಜನೆಗೆ ನೀಡಿರುವ ಒಪ್ಪಿಗೆ ಹಿಂಪಡೆಯಿರಿ; ಕೇಂದ್ರಕ್ಕೆ ಗೋವಾ ಸಿಎಂ
ಕರ್ನಾಟಕ ಸರ್ಕಾರ ಕೈಗೊಂಡಿರುವ ಈ ಯೋಜನೆಯು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಪಣಜಿ (ಗೋವಾ): ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ನೀಡಿದ್ದ ಒಪ್ಪಿಗೆಯನ್ನು ಕೂಡಲೇ ಹಿಂಪಡೆಯಬೇಕೆಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ಕೇಂದ್ರ ಪರಿಸರ ಇಲಾಖೆ ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ.
ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ: ಸಿಎಂ ಯಡಿಯೂರಪ್ಪ
"ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ನೀಡಿದ್ದ ಒಪ್ಪಿಗೆಯನ್ನು ಕೂಡಲೇ ಹಿಂಪಡೆಯುವಂತೆ ನಾವು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದೊಂದಿಗೆ ಒತ್ತಾಯಿಸಿದ್ದೇವೆ" ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು. ಈ ವಿಷಯದಲ್ಲಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಹಸ್ತಕ್ಷೇಪವನ್ನು ಕೋರುತ್ತದೆ ಎಂದು ಅವರು ಹೇಳಿದರು.
ಈ ಯೋಜನೆಗೆ ಕೇಂದ್ರ ಸಚಿವಾಲಯವು ಪರಿಸರ ಅನುಮತಿ ನೀಡಿಲ್ಲ. ಆದರೆ ಅರಣ್ಯ ಮತ್ತು ವನ್ಯಜೀವಿಗಳ ಅನುಮತಿ ಪಡೆಯುವಂತಹ ಕೆಲವು ಷರತ್ತುಗಳೊಂದಿಗೆ ಮುಂದುವರಿಯಲು ಒಪ್ಪಿಗೆ ನೀಡಿದೆ ಎಂದು ಸಾವಂತ್ ಪ್ರತಿಪಾದಿಸಿದರು.
"ನಾನು ಕೇಂದ್ರ ಸಚಿವ ಪ್ರಕಾಶ್ ಜಾವ್ದೇಕರ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಕರ್ನಾಟಕಕ್ಕೆ ನೀಡಿರುವ ಒಪ್ಪಿಗೆ ಪತ್ರವನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದೇನೆ. ಅದು ವಿಫಲವಾದರೆ ನಾವು ಅದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಪ್ರಶ್ನಿಸುತ್ತೇವೆ" ಎಂದು ಸಾವಂತ್ ಹೇಳಿದರು. ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಒಪ್ಪಿಗೆ ಹಿಂಪಡೆಯಲು ಕೋರಿ ಅಧಿಕೃತ ಪತ್ರವನ್ನು ಶುಕ್ರವಾರದೊಳಗೆ ಜಾವಡೇಕರ್‌ಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.
"ಒಪ್ಪಿಗೆಯನ್ನು ಹಿಂಪಡೆಯದಿದ್ದಲ್ಲಿ ನಾವು ಈ ವಿಷಯದಲ್ಲಿ ಪ್ರಧಾನ ಮಂತ್ರಿಯ ಹಸ್ತಕ್ಷೇಪವನ್ನೂ ಕೋರುತ್ತೇವೆ. ಅಲ್ಲದೆ, ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ನಾವು ಪ್ರಧಾನ ಮಂತ್ರಿಯವರ ಗಮನಕ್ಕೆ ತರುತ್ತೇವೆ." ಈ ವಿಷಯವು ಪ್ರಸ್ತುತ ಅಧೀನದಲ್ಲಿರುವ ಕಾರಣ ರಾಜ್ಯವನ್ನು ಸಂಪರ್ಕಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಸಾವಂತ್ ಹೇಳಿದ್ದಾರೆ.
ಈ ಯೋಜನೆಯು ರಾಜ್ಯದ ಸಸ್ಯ ಮತ್ತು ಪ್ರಾಣಿಗಳಿಗೆ ಹಾನಿ ಮಾಡುತ್ತದೆ ಎಂದು ಗೋವಾದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರ ಕೈಗೊಂಡಿರುವ ಈ ಯೋಜನೆಯು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
[With ANI Inputs]