ಶ್ರೀನಗರ: ಹಿರಿಯ ಪತ್ರಕರ್ತ ಮತ್ತು  ರೈಸಿಂಗ್ ಕಾಶ್ಮೀರ್ ನ ಮುಖ್ಯಸಂಪಾದಕ ಶುಜಾತ್ ಬುಕಾರಿಯವರನ್ನು ಗುರುವಾರದಂದು ಶ್ರೀನಗರದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ.


COMMERCIAL BREAK
SCROLL TO CONTINUE READING

ಸುದ್ದಿಮೂಲಗಳ ಪ್ರಕಾರ ಬುಕಾರಿಯ ಸೆಕ್ಯುರಿಟಿ ಆಫಿಸರ್ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶ್ರೀನಗರದ ಲಾಲ್ ಚೌಕ್ ಹತ್ತಿರದ ಪ್ರೆಸ್ ಕಾಲೋನಿಯಲ್ಲಿ ಅವರ ಮೇಲೆ ಗುಂಡು ಹಾರಿಸಲಾಗಿದೆ. ಅವರ ಮೇಲೆ ಗುಂಡಿನ ದಾಳಿ ಗೈದ ನಂತರ ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.




50ರ ಹರಯದ ಬುಕಾರಿ ಇಫ್ತಾರ್ ಪಾರ್ಟಿಗಾಗಿ ಆಫಿಸ್ ನಿಂದ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.ರೈಸಿಂಗ್ ಕಾಶ್ಮೀರ್ ದಲ್ಲಿ ಕೆಲಸ ಮಾಡುತ್ತಿರುವ ಶಫಾತ್ ಮಿರ್ ಹೇಳುವಂತೆ ಜನಸಂದಣಿ ಇರುವ ಈ ಪ್ರದೇಶದಲ್ಲಿ ನಾಲ್ವರು ದಾಳಿ ಗೈದಿದ್ದಾರೆ ಎಂದು ಅವರು ಜೀ ನ್ಯೂಸ್ ಗೆ ತಿಳಿಸಿದ್ದಾರೆ.


ಶುಜಾತ್ ಬುಕಾರಿ ಈ ಹಿಂದೆ 'ದಿ ಹಿಂದು' ಗೆ ಕಾಶ್ಮೀರದ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಪ್ರಮುಖವಾಗಿ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಹಲವಾರು ಸಮ್ಮೇಳನಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿದೆ. ಈ ಹಿಂದೆ 2000ರಲ್ಲಿಯೂ ಸಹ ಶುಜಾತ್ ಬುಕಾರಿಯವರ ಮೇಲೆ ದಾಳಿಗೈಯಲಾಗಿತ್ತು ಈ ಹಿನ್ನಲೆಯಲ್ಲಿ ಅವರಿಗೆ ಪೋಲಿಸ್ ರಕ್ಷಣೆ ಒದಗಿಸಲಾಗಿತ್ತು ಎಂದು ತಿಳಿದುಬಂದಿದೆ.


ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪತ್ರಕರ್ತ ಬುಕಾರಿ ಹತ್ಯೆಯನ್ನು ಖಂಡಿಸಿ ಸಂತಾಪ ಸೂಚಿಸಿದ್ದಾರೆ.