ತ್ರಿವಳಿ ತಲಾಖ್ ಮಸೂದೆಗೆ ಮತ್ತೆ ತಡೆ: ಕಲಾಪ ನಾಳೆಗೆ ಮುಂದೂಡಿಕೆ
ಗುರುವಾರ ಈ ಮಸೂದೆಯ ಕುರಿತು ಯಾವುದೇ ಚರ್ಚೆ ನಡೆಯದ ಹಿನ್ನೆಲೆಯಲ್ಲಿ, ಸಂಸತ್ತಿನ ಮುಂದಿನ ಅಧಿವೇಶನಕ್ಕೆ ಮುಂದೂಡುವ ಸಾಧ್ಯತೆಯಿದೆ.
ನವ ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ತ್ರಿವಳಿ ತಲಾಖ್ ತಲಾಖ್ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ವಿರೋಧ ಪಕ್ಷಗಳು ಇಂದು ರಾಜ್ಯಸಭೆಯಲ್ಲಿ ಆಗ್ರಹಿಸಿದವು. ಆದರೆ ಗುರುವಾರ ಈ ಮಸೂದೆಯ ಕುರಿತು ಯಾವುದೇ ಚರ್ಚೆ ನಡೆಯದ ಹಿನ್ನೆಲೆಯಲ್ಲಿ, ಸಂಸತ್ತಿನ ಮುಂದಿನ ಅಧಿವೇಶನಕ್ಕೆ ಮುಂದೂಡುವ ಸಾಧ್ಯತೆಯಿದೆ.
ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣಾ) ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ವಿರೋಧಪಕ್ಷಗಳು ಒತ್ತಡ ಹೇರಿದವು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ "ಯಾವುದೇ ಮಸೂದೆಯನ್ನು ಮತ್ತಷ್ಟು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸುವುದು ಸದನದ ಹಕ್ಕು. ಈ ವಿಚಾರದಲ್ಲಿ ಅಸಾಧ್ಯವೆಂದು ಹೇಳಲು ಸಾಧ್ಯವೇ ಇಲ್ಲ. ಅಲ್ಲದೆ ಮಸೂದೆ ವಿಚಾರದಲ್ಲಿ ನಮಗೆ ಆಕ್ಷೇಪವಿಲ್ಲ. ಆದರೆ, ಮಸೂದೆ ಯಲ್ಲಿನ ಕೆಲವು ವಿಷಯದಲ್ಲಿ ಮಾತ್ರ ನಮ್ಮ ಆಕ್ಷೇಪವಿದೆ ಎಂದು ಹೇಳಿದರು.
ಆದರೆ ರಾಜ್ಯಸಭೆ ಉಪಸಭಾಪತಿ ಪಿ.ಜೆ.ಕುರಿಯನ್ ಅವರು ಸರ್ಕಾರದ ವ್ಯವಹಾರಗಳ ಪಟ್ಟಿಯಲ್ಲಿರುವ ಜಿಎಸ್'ಟಿ ಮಸೂದೆಯ ಕುರಿತಾದ ಚರ್ಚೆಯನ್ನು ಮೊದಲು ಮುಂದುವರಿಸುವಂತೆ ಹೇಳಿದ ಪರಿಣಾಮ, ಸದಸ್ಯರು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು. ಈ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಈ ಮಸೂದೆ ಕುರಿತಾಗಿ ವಿರೋಧಪಕ್ಷಗಳ ನಡೆಯನ್ನು ತಿಕಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, "ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಮಾಡಿದವು. ಈ ಮಸೂದೆ ಬಗ್ಗೆ ಯಾವುದೇ ಸಮಸ್ಯೆಯಿದ್ದಲ್ಲಿ ಅದನ್ನು ಸಂಸತ್ತಿನಲ್ಲಿ ಮಾತನಾಡಲಿ. ಅದು ಬಿಟ್ಟು ಪದೇ ಪದೇ ಚರ್ಚೆಯಲ್ಲಿ ಭಾಗವಹಿಸದೆ ಸದನದಿಂದ ಕಾಂಗ್ರೆಸ್ ಹೊರಹೊಗುತ್ತಿರುವುದೇಕೆ?" ಎಂದು ಪ್ರಶ್ನಿಸಿದರು.
"ಭಾರತೀಯ ಮುಸ್ಲಿಂ ಮಹಿಳೆಯರಿಗೆ ನ್ಯಾಯದ ಮಾರ್ಗವನ್ನು ತಡೆಯೊಡ್ಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಸ್ಮೃತಿ ಇರಾನಿ ಹೇಳಿದರು.
ಕಳೆದ ವಾರವಷ್ಟೇ ಕೆಳಮನೆಯಲ್ಲಿ ಇದೇ ಮಸೂದೆ ಮಂಡನೆಯಾಗಿದ್ದಾಗ ಹೆಚ್ಚು ಕಡಿಮೆ ಮೌನಕ್ಕೆ ಶರಣಾಗಿದ್ದ ಕಾಂಗ್ರೆಸ್ ಅನಂತರದ ಧ್ವನಿ ಮತದ ವೇಳೆ ಮಸೂದೆ ಪರವಾಗಿಯೇ ಮತ ಹಾಕಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಅನುಭವಿಸುತ್ತಿರುವ ಎನ್‌ಡಿಎ ಸರ್ಕಾರಕ್ಕೆ ಬಿಸಿ ನೀಡಿದ ಅದು, ಮಸೂದೆ ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸುವಂತೆ ಆಗ್ರಹಿಸಿತು. ಇದಕ್ಕೆ ಆಡಳಿತ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಯಲ್ಲಿ ಮೇಲ್ಮನೆ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.
ಕಾಂಗ್ರೆಸ್‌ಗೆ ಟಿಎಂಸಿ, ಎಐಎಡಿಎಂಕೆ ಮತ್ತು ಬಿಜು ಜನತಾ ದಳದ ಬೆಂಬಲವೂ ಇದೆ. ಇನ್ನೊಂದೆಡೆ ಎನ್‌ಡಿಎ ಅಂಗಪಕ್ಷಗಳಾದ ಶಿವಸೇನೆ ಹಾಗೂ ಟಿಡಿಪಿ ಕೂಡ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿವೆ.