ನವದೆಹಲಿ: ಮನಿ ಲಾಂಡರಿಂಗ್ ಆರೋಪದಡಿ ತನಿಖೆ ಎದುರಿಸುತ್ತಿರುವ ರಾಬರ್ಟ್ ವಾದ್ರಾ ಸೋಮವಾರ ದೆಹಲಿ ನ್ಯಾಯಾಲಯದಲ್ಲಿ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿದ್ದಾರೆ. ರಾಷ್ಟ್ರ ರಾಜಧಾನಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ರಾಬರ್ಟ್ ವಾದ್ರಾ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿಂದೆ, ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಸ್ ಅವೆನ್ಯೂ ನ್ಯಾಯಾಲಯವು ವಾದ್ರಾಗೆ ನಿರೀಕ್ಷಣಾ ಜಾಮೀನು ನೀಡಿತು. ಜಾಮೀನು ಮಂಜೂರು ಮಾಡುವಾಗ, ವಾದ್ರಾ ವಿದೇಶ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ ಪೂರ್ವ ಅನುಮತಿ ಪಡೆಯಬೇಕು ಎಂದು ನ್ಯಾಯಾಲಯ ತಿಳಿಸಿತ್ತು.


ಅದರಂತೆ ವೈದ್ಯಕೀಯ ಚಿಕಿತ್ಸೆಗಾಗಿ ಸ್ಪೇನ್‌ಗೆ ಪ್ರಯಾಣಿಸಬೇಕಿರುವ ರಾಬರ್ಟ್ ವಾದ್ರಾ ನ್ಯಾಯಾಲಯದ ಅನುಮತಿ ಕೋರಿದ್ದಾರೆ.


ಈ ಹಿಂದೆ ಜೂನ್‌ನಲ್ಲಿ, ವೈದ್ಯಕೀಯ ಚಿಕಿತ್ಸೆಗೆ ಒಳಗಾಗಲು ಆರು ವಾರಗಳ ಕಾಲ ಯುಎಸ್ ಮತ್ತು ನೆದರ್‌ಲ್ಯಾಂಡ್‌ಗೆ ಪ್ರಯಾಣಿಸಲು ವಾದ್ರಾ ಅವರಿಗೆ ರೂಸ್ ಅವೆನ್ಯೂ ನ್ಯಾಯಾಲಯ ಅನುಮತಿ ನೀಡಿತು. ಆದಾಗ್ಯೂ, ಅವರು ಲಂಡನ್‌ಗೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಯಿತು.


ವಾದ್ರಾಗೆ ಅನುಮತಿ ನೀಡುವಾಗ, ಆತನ ವಿರುದ್ಧ ಹೊರಡಿಸಲಾದ ಯಾವುದೇ ಲುಕ್ ಔಟ್ ಸುತ್ತೋಲೆ ಆರು ವಾರಗಳವರೆಗೆ ಅಮಾನತುಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.


ಲಂಡನ್‌ನಲ್ಲಿ 1.9 ದಶಲಕ್ಷ ಪೌಂಡ್‌ಗಳ ಆಸ್ತಿಯನ್ನು ಖರೀದಿಸಲು ಸಂಬಂಧಿಸಿದ ಹಣ ವರ್ಗಾವಣೆಯ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಆರೋಪ ಎದುರಿಸುತ್ತಿದ್ದಾರೆ. ಅವರ ಒಡೆತನದ ಸಾಗರೋತ್ತರ ಆಸ್ತಿಗಳನ್ನು ಒಳಗೊಂಡ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.


ಈ ಪ್ರಕರಣದಲ್ಲಿ ಏಪ್ರಿಲ್ 1 ರಂದು ವಾದ್ರಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಯಿತು. ಆದರೆ ಪೂರ್ವಾನುಮತಿ ಇಲ್ಲದೆ ಭಾರತದಿಂದ ಹೊರಗೆ ಹೋಗದಂತೆ ಆದೇಶಿಸಲಾಯಿತು. ಯಾವುದೇ ಸಾಕ್ಷ್ಯಾಧಾರಗಳನ್ನು ಹಾಳು ಮಾಡಬೇಡಿ ಮತ್ತು ಪ್ರಕರಣದ ಯಾವುದೇ ಸಾಕ್ಷಿಯನ್ನು ಪ್ರಭಾವಿಸಬೇಡಿ ಎಂದು ನ್ಯಾಯಾಲಯ ವಾದ್ರಾ ಅವರಿಗೆ ಎಚ್ಚರಿಕೆ ನೀಡಿದೆ.


ಇದೇ ಪ್ರಕರಣದಲ್ಲಿ ವಾದ್ರಾ ಅವರ ಆಪ್ತ ಸಹಾಯಕ ಮನೋಜ್ ಅರೋರಾಗೆ ಕೂಡ ನಿರೀಕ್ಷಣಾ ಜಾಮೀನು ನೀಡಲಾಗಿದೆ.