ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಲಿಯುಗದ ಮಂಥರೆ, ಕೈಕೇಯಿಯಂತೆ: ಸಿಂಘ್ವಿ
ಕಲಿಯುಗದ ರಾಮಾಯಣದಲ್ಲಿ ಮಂಥರೆಯಾಗಿರುವ ಆರ್‌ಎಸ್‌ಎಸ್ ಮತ್ತು ಕೈಕೇಯಿಯಂತಿರುವ ಬಿಜೆಪಿ ಜೋಡಿ ಕಳೆದ 30 ವರ್ಷಗಳಿಂದ ರಾಮನನ್ನು ಗಡಿಪಾರು ಮಾಡಿವೆ ಎಂದು ಸಿಂಘ್ವಿ ವಾಗ್ದಾಳಿ ನಡೆಸಿದ್ದಾರೆ.
ರಾಯಪುರ: ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಕಲಿಯುಗದ ಮಂಥರೆ ಮತ್ತು ಕೈಕೇಯಿಗೆ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಹೋಲಿಸಿ ಟೀಕೆ ಮಾಡಿದ್ದಾರೆ.
ಅಂದಿನ ರಾಮಾಯಣದಲ್ಲಿ ಕೈಕೇಯಿ ಶ್ರೀರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದ್ದಳು. ಆದರೆ ಕಲಿಯುಗದ ರಾಮಾಯಣದಲ್ಲಿ ಮಂಥರೆಯಾಗಿರುವ ಆರ್‌ಎಸ್‌ಎಸ್ ಮತ್ತು ಕೈಕೇಯಿಯಂತಿರುವ ಬಿಜೆಪಿ ಜೋಡಿ ಕಳೆದ 30 ವರ್ಷಗಳಿಂದ ರಾಮನನ್ನು ಗಡಿಪಾರು ಮಾಡಿವೆ ಎಂದು ಸಿಂಘ್ವಿ ವಾಗ್ದಾಳಿ ನಡೆಸಿದ್ದಾರೆ.
ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದವನ್ನು ಎತ್ತಿಹಿಡಿದು, ಚುನಾವಣೆ ನಂತರ ರಾಮನನ್ನು 'ಗಡಿಪಾರು' ಮಾಡುತ್ತಾರೆ. ತಮ್ಮ ರಾಜಕೀಯ ಲಾಭಗಳಿಗೆ ಶ್ರೀರಾಮನನ್ನು ಆಹ್ವಾನಿಸಿ ಬಳಿಕ ದೇವರನ್ನು ಅವಮಾನಿಸುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ.
ಸದ್ಯದಲ್ಲೇ ಖಾಸಗಿ ಮಸೂದೆ ಜಾರಿಗೊಳಿಸಿ ರಾಮ ಮಂದಿರ ನಿರ್ಮಾಣ ಮಾಡುವ ಬಗೆಗಿನ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಂಘ್ವಿ, "1992ರ ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ರಾಮಜನ್ಮಭೂಮಿ ವಿವಾದವನ್ನು ಕೆದಕಿ, ಚುನಾವಣೆ ನಂತರ ರಾಮನನ್ನು ಮರೆತೇ ಬಿಡುತ್ತಾರೆ" ಎಂದು ಹೇಳಿದ್ದಾರೆ.
"ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ವಿಚಾರಗಳನ್ನು ಬಳಸಿಕೊಳ್ಳುವ ಮೂಲಕ ದೇವರಿಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಅಷ್ಟೇ ಅಲ್ಲದೆ, ಈಗ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸುತ್ತಿರುವ ಬಿಜೆಪಿ, ಕಳೆದ ನಾಲ್ಕು ವರ್ಷಗಳಿಂದ ಮಾಡಿದ್ದೇನು? ಅಂದಿನಿಂದಲೇ ಏಕೆ ಈ ವಿಚಾರವನ್ನು ಪರಿಗಣಿಸಲಿಲ್ಲ ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ.