ನವದೆಹಲಿ: ಗಲ್ವಾನ್ ಕಣಿವೆಯಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಚೀನಾ ಜೊತೆಗಿನ ಉದ್ವಿಗ್ನತೆಯ ನಡುವೆ ಭಾರತದ ಹಳೆ ಸ್ನೇಹಿತ ರಾಷ್ಟ್ರವಾಗಿರುವ ರಷ್ಯಾ ಭಾರತಕ್ಕೆ ಸಾಥ್ ನೀಡಿದೆ. ಮಂಗಳವಾರ ನಡೆದ ಭಾರತ, ರಷ್ಯಾ ಮತ್ತು ಚೀನಾದ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ರಷ್ಯಾ ಯುಎನ್ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬಲವಾದ ಬೆಂಬಲ ನೀಡಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ರಷ್ಯಾದ ವಿದೇಶಾಂಗ ಸಚಿವ ಸರೆಯ್ ಲಾವ್ರೋವ್, ಇಂದು ನಾವು ವಿಶ್ವಸಂಸ್ಥೆಯಲ್ಲಿ ನಡೆಯಬೇಕಾಗಿರುವ ಸುಧಾರಣೆಗಳ ಬಗ್ಗೆ ಚರ್ಚೆ ನಡೆಸಿದ್ದು, ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಬಲ ನಾಮನಿರ್ದೇಶಿತ ರಾಷ್ಟ್ರವಾಗಿದ್ದು, ನಾವು ಈ ನಿಟ್ಟಿನಲ್ಲಿ ಭಾರತವನ್ನು ಬೆಂಬಲಿಸಲಿದ್ದೇವೆ ಎಂದು ಹೇಳಿದ್ದಾರೆ.


ಈ ಸಂದರ್ಭದಲ್ಲಿ ಚೀನಾದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಭಾರತದ ಲಡಾಕ್ ನಲ್ಲಿ ನಡೆಯುತ್ತಿರುವ ಉದ್ವಿಗ್ನತೆಯನ್ನು ಪ್ರಸ್ತಾಪಿಸಿರುವ ಸರ್ಗೆಯ ಲಾವ್ರೋವ್, ಈ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶ ಅನಗತ್ಯ ಎಂದು ಹೇಳಿದ್ದಾರೆ. ಉಭಯ ದೇಶಗಳು ಈ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲಿವೆ ಎಂಬ ಭರವಸೆ ಅವರು ವ್ಯಕ್ತಪಡಿಸಿದ್ದಾರೆ.


ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕಾಗಿ ರಷ್ಯಾ ಭಾರತವನ್ನು ಬೆಂಬಲಿಸುತ್ತಿರುವುದು ಇದೇ ಮೊದಲ ಬಾರಿ ಅಲ್ಲ ಎಂಬುದು ಇಲ್ಲಿ ಗಮನಾರ್ಹ. ರಷ್ಯಾ ವಿದೇಶಾಂಗ ಸಚಿವರ ಈ ಹೇಳಿಕೆ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ಭವಿಸಿರುವ ಉದ್ವಿಗ್ನತೆಯ ಸಮಯದಲ್ಲಿ ಬಂದ ಕಾರಣ ಭಾರಿ ಮಹತ್ವ ಪಡೆದುಕೊಂಡಿದೆ.