ನಿಳಕ್ಕಲ್‌: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಅನುಮತಿಸಿದ ನಂತರ ಇದೇ ಮೊದಲ ಬಾರಿಗೆ ವಾರ್ಷಿಕ ಪೂಜಾ ಕೈಂಕರ್ಯಗಳಿಗಾಗಿ ಬುದವಾರ ಅಯ್ಯಪ್ಪನ ದೇಗುಲದ ದ್ವಾರ ತೆರೆದಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶ ಅವಕಾಶದ ವಿರುದ್ಧ ಕೇರಳದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಹಲವಾರು ಹಿಂದೂ ಸಂಘಟನೆಗಳು ಇಂದು ಕೇರಳ ಬಂದ್‌ಗೆ ಕರೆ ನೀಡಿದೆ. 24 ಗಂಟೆಗಳ ಕಾಲ ಬಂದ್‌ ಆಚರಿಸಲಾಗುತ್ತದೆ ಎಂದು ಈ ಸಮಿತಿ ಹೇಳಿದೆ.  ಈ ಬಂದ್‌ಗೆ ಬಿಜೆಪಿ ಕೂಡ ಬೆಂಬಲ ನೀಡಿದೆ. ಈ ನಡುವೆ ಶಬರಿಮಲೆ ದೇಗುಲದ ಬಳಿ ಇರುವ ಎರಡು ಬೇಸ್‌ ಕ್ಯಾಂಪ್‌ಗಳು ಸೇರಿದಂತೆ ನಾಲ್ಕು ಪ್ರದೇಶಗಳಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ನಿಳಕ್ಕಲ್ ಸೇರಿದಂತೆ ಹಲವೆಡೆ ಸೆಕ್ಷನ್ 144 ಜಾರಿ:
ಶಬರಿಮಲೆ ದೇಗುಲದ ಪ್ರಮುಖ ಬೇಸ್‌ ಪಾಯಿಂಟ್‌ ಆಗಿರುವ ನಿಳಕ್ಕಲ್‌ನಲ್ಲಿ ಹೆಚ್ಚು ಹಿಂಸಾಚಾರ ನಡೆದಿದೆ. ದೇಗುಲದತ್ತ ಮಹಿಳೆಯರು ಹೋಗದಂತೆ ತಡೆಯುವ ಸಲುವಾಗಿ ಈ ಪ್ರದೇಶದಲ್ಲಿ ಪ್ರತಿಭಟನಾನಿರತರ ದಂಡೇ ನೆರೆದಿತ್ತು. ಬುಧವಾರ ಬೆಳಗ್ಗೆಯಿಂದಲೂ 10 ರಿಂದ 50 ವಯೋಮಾನದ ಮಹಿಳೆಯರು ದೇವಾಲಯಕ್ಕೆ ತೆರಳದಂತೆ ಕಟ್ಟೆಚ್ಚರ ವಹಿಸಿದ್ದ ಈ ಗುಂಪು ಪ್ರತಿಯೊಂದು ವಾಹನವನ್ನು ಪರೀಕ್ಷಿಸಿ ನಂತರ ಮುಂದಕ್ಕೆ ಬಿಡುತ್ತಿತ್ತು. ಇಂದು ಬಂದ್ ಇರುವ ಕಾರಣ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದ್ದು ಶಬರಿಮಲೆ ದೇಗುಲದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ ನಿಲಕ್ಕಲ್, ಪಂಬಾ, ಎರುಮೇಲಿ, ವಂಡಿಪೆರಿಯಾರ್ ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


ಮಹಿಳೆಯರಿಗೆ ಸಿಗದ ಅಯ್ಯಪ್ಪನ ದರ್ಶನ:
ವಾಹನದಲ್ಲಿ ಮಹಿಳೆಯರು ಕಂಡ ಕೂಡಲೇ ಅವರನ್ನು ಬಲವಂತವಾಗಿ ಹಿಂದಿರುಗುವಂತೆ ತಿಳಿಸುತ್ತಿತ್ತು, ಇಲ್ಲವೇ ಮುಂದಕ್ಕೆ ಹೋಗಲು ಬಿಡುತ್ತಲೇ ಇರಲಿಲ್ಲ. ಈ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ ಪೊಲೀಸರು ದೇಗುಲ ಪ್ರವೇಶಕ್ಕೆ ಬಂದಿದ್ದ ಮಹಿಳೆಯರಿಗೆ ಭದ್ರತೆ ಕೊಡಲು ಮುಂದಾಗಿದ್ದರು. ಈ ವೇಳೆ  ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆಯಿತು. ತಿಂಗಳ ಪೂಜೆಗಾಗಿ ಬುಧವಾರ ಸಂಜೆ 5 ಗಂಟೆಗೆ ದೇಗುಲದ ಬಾಗಿಲು ತೆರೆಯಿತಾದರೂ, ಅಯ್ಯಪ್ಪನ ದರ್ಶನಕ್ಕಾಗಿ ಬಂದ ಮಹಿಳೆಯರ ರಕ್ಷಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಅದರ ನಡುವೆಯೂ ಮಹಿಳೆಯರನ್ನು ವಾಪಸ್ ಕಳುಹಿಸುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾದರು.