ದಲಿತ ನಿಂದನೆ ಪ್ರಕರಣ: ಸಲ್ಮಾನ ಖಾನ್, ಶಿಲ್ಪಾ ಶೆಟ್ಟಿಗೆ ನೋಟಿಸ್ ಜಾರಿ
ಚುರು: ಬಾಲಿವುಡ್ ನಟ ನಟಿಯರಾದ ಸಲ್ಮಾನ ಖಾನ ಮತ್ತು ಶಿಲ್ಪಾ ಶೆಟ್ಟಿ ಅವರಿಗೆ ರಾಜಸ್ತಾನದ ಚುರು ಉಪ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹುಕುಂ ಸಿಂಗ್ ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚಿಗೆ ದಲಿತ ಸಮುದಾಯವಾದ ವಾಲ್ಮೀಕಿಗೆ ಭಂಗಿ ಎಂದು ಕರೆದು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕೆ ಪ್ರತಿಯಾಗಿ ಕಳೆದ ತಿಂಗಳು ಮುಂಬೈ ನಲ್ಲಿ ಇವರ ಮೇಲೆ ಕೇಸ್ ದಾಖಲಿಸಲಾಗಿತ್ತು, ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಕೂಡಾ ವಾರ್ತಾ ಮತ್ತು ಪ್ರಸಾರ ಇಲಾಖೆ, ದೆಹಲಿ, ಮುಂಬೈ ಪೋಲಿಸರಿಂದ ಉತ್ತರ ಕೇಳಿದ್ದನ್ನು ನಾವು ಗಮನಿಸಬಹುದು.
ಈ ನಟರ ಮೇಲೆ ದೆಹಲಿ ಸಫಾಯಿ ಕರ್ಮಾಚಾರಿ ಆಯೋಗದ ಮಾಜಿ ಅಧ್ಯಕ್ಷ ಹರನಾಮ ಸಿಂಗ್ ಕೇಸ್ ದಾಖಲಿಸಿದ್ದರು. ಸಲ್ಮಾನ ಖಾನ್ ಟೈಗರ್ ಜಿಂದಾ ಹೈ ಚಿತ್ರದ ಪ್ರೊಮೋಷನ್ ಸಂದರ್ಭದಲ್ಲಿ ತನ್ನ ನೃತ್ಯದ ಕೌಶಲ್ಯದ ಕುರಿತಾಗಿ ಪ್ರಸ್ತಾಪಿಸುತ್ತಾ ದಲಿತ ನಿಂದನೆ ಪದ ಬಳಸಿದ್ದರು.ಅದೇ ರೀತಿಯಾಗಿ ಶಿಲ್ಪಾ ಶೆಟ್ಟಿ ತನ್ನ ಮನೆಯಲ್ಲಿ ತಾನು ಹೇಗೆ ಕಾಣುತ್ತೇನೆ ಎನ್ನುವುದರ ಕುರಿತಾಗಿ ಮಾತನಾಡುತ್ತಾ ಸಮುದಾಯದ ನಿಂದನೆ ಪದವನ್ನು ಬಳಸಿದ್ದರು.