ನವದೆಹಲಿ: ದೇಶಾದ್ಯಂತ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಡಾಖ್‌ನ ಡಿಸ್ಕಿಟ್ ಗ್ರಾಮದಲ್ಲಿ ತನ್ನ ನೂತನ ಶಾಖೆಯನ್ನು ಶನಿವಾರ ಸ್ಥಾಪಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. 


COMMERCIAL BREAK
SCROLL TO CONTINUE READING

ಸಮುದ್ರ ಮಟ್ಟಕ್ಕಿಂತ 10,310 ಅಡಿ ಎತ್ತರದಲ್ಲಿರುವ ಈ ಗ್ರಾಮದ ನುಬ್ರಾ ಕಣಿವೆಯಲ್ಲಿ ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು.



ಪಾಕಿಸ್ತಾನ ಗಡಿಯಿಂದ 80 ಕಿ.ಮೀ ಹಾಗೂ ಸಿಯಾಚಿನ್ ಗಡಿಯಿಂದ 150 ಕಿ.ಮೀ. ದೂರದಲ್ಲಿ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ತನ್ನ ನೂತನ ಶಾಖೆ ತೆರೆದಿದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಡಿಸ್ಕಿಟ್ ಗ್ರಾಮವು 6000 ಜನಸಂಖ್ಯೆಯನ್ನು ಹೊಂದಿದೆ.


ಲಡಾಕ್‌ನ ದೂರದ ಪ್ರದೇಶಗಳಲ್ಲಿ ಆರ್ಥಿಕ ವಹಿವಾಟನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ  ಎಸ್‌ಬಿಐನ 14 ಶಾಖೆಗಳು ಲಡಾಕ್ ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಕೇಂದ್ರಾಡಳಿತ ಪ್ರದೇಶ ರಚನಾನಂತರ ತನ್ನ ಶಾಖೆಗಳ ಸಂಖ್ಯೆಯನ್ನು ಹೆಚಿಸಲು ಎಸ್‌ಬಿಐ ಯೋಜಿಸಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿನ ರಾಜ್ಯ ಮಟ್ಟದ ಬ್ಯಾಂಕರ್‌ ಸಮಿತಿಯ (ಎಸ್‌ಎಲ್‌ಬಿಸಿ) ಜವಾಬ್ದಾರಿ ವಹಿಸಿಕೊಳ್ಳುವುದಾಗಿಯೂ ಎಸ್‌ಬಿಐ ಆಸಕ್ತಿ ವ್ಯಕ್ತಪಡಿಸಿದೆ.